ಬೆಂಗಳೂರು: ನಶಿಸುತ್ತಿರುವ ಕೆರೆಗಳನ್ನು ಜೀವಂತವಾಗಿಸಲು ಹಾಗೂ ಮುಂದಿನ ಪೀಳಿಗೆಗೆ ಕೆರೆಗಳ ಮಹತ್ವವನ್ನು ಸಾರುವ ಸಲುವಾಗಿ ನಮ್ಮ ಬೆಂಗಳೂರು ಪ್ರತಿಷ್ಠಾನ ಹೊಚ್ಚ ಹೊಸ ರೀತಿಯಲ್ಲಿ ಶನಿವಾರ `ಕೆರೆಹಬ್ಬ' ಆಚರಿಸಿದೆ.
ಪುಟ್ಟೇನಹಳ್ಳಿ ಕೆರೆಯನ್ನು ಅಭಿವೃದ್ಧಿ ಪಡಿಸುವ ಸಲುವಾಗಿ ಪುಟ್ಟೇನಹಳ್ಳಿ ನೇಬರ್ ಹುಡ್ ಕೆರೆ ಅಭಿವೃದ್ಧಿ ಸಂಸ್ಥೆ(ಪಿಎನ್‍ಎಲ್ಐಟಿ), ಬಿಬಿಎಂಪಿ, ನಮ್ಮ ಬೆಂಗಳೂರು ಪ್ರತಿಷ್ಠಾನ ಮತ್ತು ಅಘ್ರ್ಯಮ್ಸ್ ಇಂಡಿಯಾ ವಾಟರ್ ಪೋರ್ಟಲ್ ಸಂಸ್ಥೆ ಸಹಯೋಗದಲ್ಲಿ ಶನಿವಾರ ಕೆರೆ ಹಬ್ಬ ಆಯೋಜಿಸಲಾಗಿತ್ತು. ವೀಕೆಂಡ್ ಹೆಸರಲ್ಲಿ ಒಂದಷ್ಟು ದೂರ ಜಾಲಿ ರೈಡ್ ಹೋಗುವ ಮಂದಿ ಶನಿವಾರ ಕೆರೆ ಅಂಗಳದಲ್ಲಿ ತಮ್ಮ ಮಕ್ಕಳೊಂದಿಗೆ ಆಗಮಿಸಿ ಹಬ್ಬಕ್ಕೆ ಹೊಸ ಮೆರುಗನ್ನು ನೀಡಿದರು. ಈ ವಿನೂತನ ಹಬ್ಬಕ್ಕೆ ಸುಮಾರು 350ಕ್ಕೂ ಹೆಚ್ಚು ಮಂದಿ ಸಾಕ್ಷಿಯಾಗಿದ್ದರು.
ಕಾರ್ಯಕ್ರಮದ ವೇಳೆ ಪ್ರತಿಷ್ಠಾನದ ಕಾರ್ಯ ನಿರ್ವಹಣಾಧಿಕಾರಿ ಶ್ರೀಧರ್ ಮಾತನಾಡಿ, ನಗರದಲ್ಲಿ ಈ ಹಿಂದೆ ಇದ್ದ ಸಾವಿರಕ್ಕೂ ಹೆಚ್ಚು ಕೆರೆಗಳು ಭೂಗಳ್ಳರ ಪಾಲಾಗಿದೆ. ಈಗಿರುವ ಕೆಲವೇ ಕೆಲವು ಕೆರೆಗಳನ್ನು ಉಳಿಸಿಕೊಳ್ಳುವ ಪ್ರಯತ್ನವೇ ಈ `ಕೆರೆ ಹಬ್ಬ'ದ ಅಭಿಯಾನವಾಗಿದೆ . ಈಗಾಗಲೇ ಜನವರಿ ತಿಂಗಳಲ್ಲಿ ನಗರದ ಸರ್ಜಾಪುರದ ಕೈಕೊಂಡನಹಳ್ಳಿ ಕೆರೆಯ ಮೂಲಕ ಈ ಹಬ್ಬಕ್ಕೆ ಚಾಲನೆ ನೀಡಿದ್ದು ನಗರವಾಸಿಗಳು ಸಕ್ರಿಯವಾಗಿ ಪಾಲ್ಗೊಂಡಿದ್ದರು. ಅದರ ಮುಂದುವರಿದ ಭಾಗವಾಗಿ ಈ ಬಾರಿ ಪುಟ್ಟೇನಹಳ್ಳಿ ಕೆರೆಯನ್ನು ಆಯ್ದುಕೊಳ್ಳಲಾಗಿದೆ.
ಕೆರೆಹಬ್ಬ ಹೆಸರಿನಲ್ಲಿ ನಮ್ಮ ಬೆಂಗಳೂರು ಪ್ರತಿಷ್ಠಾನ ಆರಂಭಿಸಿರುವ ಈ ಅಭಿಯಾನವು 2015ರಿಂದ 2019ರವರೆಗೆ ಸರಣಿಯಾಗಿ ಐದು ವರ್ಷಗಳ ಕಾಲ ನಡೆಸಲು ನಿರ್ಧರಿಸಲಾಗಿದೆ. ಪ್ರತಿ ವರ್ಷ 12 ಕೆರೆಗಳನ್ನು ಅಭಿವೃದ್ಧಿ ಪಡಿಸುವ ಗುರಿ ಹೊಂದಲಾಗಿದ್ದು, 2019ರ ಅಂತ್ಯದ ವೇಳೆಗೆ 60 ಕೆರೆಗಳನ್ನು ಅಬಿsವೃದಿಟಛಿಪಡಿಸುವುದಾಗಿ ಅವರು ತಿಳಿಸಿದರು.
ಕೆರೆಹಬ್ಬ ಅಭಿಯಾನದಲ್ಲಿ ಪಾಲ್ಗೊಂಡ ಜನರಿಗೆ ಮೋಜು-ಮನರಂಜನೆ ನೀಡುವುದರ ಜತೆಗೆ ಕೆರೆಗಳ ರಕ್ಷಣೆ, ಸಮುದಾಯಗಳ ಜವಾಬ್ದಾರಿ ಕುರಿತು ಅರಿವು ಮೂಡಿಸಲಾಯಿತು. ಹಸಿರು ಸೌಂದರ್ಯದ ಮೌಲ್ಯಗಳ ಕುರಿತು ಮಾಹಿತಿ ಒದಗಿಸುವ ಕಾರ್ಯಾಗಾರ ಜತೆಗೆ ಮನರಂಜನೆಯ ಜನಪದ ಕಥೆಗಳು, ಕೆರೆಗಳ ರಕ್ಷಣೆಗೆ ಸಂಬಂಧಿಸಿದ ಸಂಗೀತ, ಹೊಸ ಪ್ರಯೋಗದ ಮೂಲಕ ಜ್ಞಾನದ ಚಟುವಟಿಕೆ, ಸಾಂಪ್ರದಾಯಿಕ ಕ್ರೀಡೆಗಳನ್ನು ನಡೆಸುವ ಮೂಲಕ ಕೆರೆ ರಕ್ಷಣೆಯ ಮಹತ್ವ ತಿಳಿಸಿಕೊಡಲಾಯಿತು. ಗ್ರಾಮೀಣ ಆಟಗಳಾದ ಬಂಡಿ ಓಡಿಸುವ ಸ್ಪರ್ಧೆ, ಗಾಳಿಪಟ ಹಾರಾಟ, ಹನಿ ನೀರಾವರಿ ಬಗ್ಗೆ ಅರಿವು, ಚಿತ್ರ ಕಲೆ ಹಾಗೂ ಇತರೆ ಚಟುವಚಿಕೆಗಳಲ್ಲಿ ಪುಟಾಣಿಗಳು ಪಾಲ್ಗೊಂಡು ಸಂತಸ ವ್ಯಕ್ತಪಡಿಸಿದರು. ಇನ್ನು ಕೆಲವರು ಕೆರೆ ಮಧ್ಯೆ ಹಾರಾಡುವ ಪಕ್ಷಿಗಳ ಹಾಗೂ ಕೆಲವು ವಲಸೆ ಬಂದ ಅಪರೂಪದ ಪಕ್ಷಿಗಳ ಫೋಟೋ ತೆಗೆಯುವಲ್ಲಿ ತಲ್ಲೀನರಾಗಿ ಹಬ್ಬವನ್ನು ಯಶಸ್ವಿಯಾಗಿಸಿದರು. ಪಿಎನ್‍ಎಲ್‍ಐಟಿ ಟ್ರಸ್ಟಿ ಉಷಾ ರಾಜಗೋಪಾಲನ್ ಹಾಗೂ ಸುತ್ತಮುತ್ತಲಿನ ಅಪಾರ್ಟ್‍ಮೆಂಟ್ ವಾಸಿಗಳು ಸಕ್ರಿಯವಾಗಿ ಪಾಲ್ಗೊಂಡಿದ್ದರು.