ಜಿಲ್ಲಾ ಸುದ್ದಿ

ಮಾನವ ಕಳ್ಳ ಸಾಗಣೆ ತಡೆ: ಸಲಹೆಗೆ ಹೈ ಸೂಚನೆ

Srinivasamurthy VN

ಬೆಂಗಳೂರು: ಮಾನವ ಮತ್ತು ಮಕ್ಕಳ ಕಳ್ಳಸಾಗಣೆಯಂತಹ ಪ್ರಕರಣಗಳನ್ನು ತಡೆಗಟ್ಟಲು ಮತ್ತು ಅಂತಹ ಪ್ರಕರಣ ವಿರುದ್ಧ ಯಾವ ರೀತಿ ವ್ಯವಹರಿಸಬೇಕೆಂಬುದರ ಕುರಿತು ನ್ಯಾಯಾಲಯಕ್ಕೆ ಸಲಹೆ ನೀಡುವಂತೆ ಹೈಕೋರ್ಟ್ ಕಾನೂನು ಸೇವೆಗಳ ಘಟಕಕ್ಕೆ ಸೂಚಿಸಿದೆ.

ಮಾನವ ಮತ್ತು ಮಕ್ಕಳ ಕಳ್ಳಸಾಗಣೆ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚಾಗಿ ದಾಖಲಾಗುತ್ತಿದ್ದು, ನಾಪತ್ತೆ ಆದವರನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಮಾರ್ಗಸೂಚಿ ರಚಿಸುವಂತೆ ಕೋರಿ ಹೈಕೋರ್ಟ್ ಕಾನೂನು ಸೇವಾ ಘಟಕ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿತ್ತು.

ವಿಚಾರಣೆ ನಡೆಸಿದ ಮುಖ್ಯ ನ್ಯಾ.ಡಿ.ಎಚ್. ವಘೇಲಾ ಮತ್ತು ನ್ಯಾ.ರಾಮಮೋಹನ ರೆಡ್ಡಿ ಅವರಿದ್ದ ವಿಭಾಗೀಯ ಪೀಠ, ಈ ರೀತಿಯ ಪ್ರಕರಣಗಳನ್ನು ತಡೆಗಟ್ಟಲು ಸರ್ಕಾರ ಯಾವ
ರೀತಿಯ ಕ್ರಮ ತೆಗೆದುಕೊಳ್ಳಬೇಕು ಎಂಬುದನ್ನು ಸೂಚಿಸುವಂತೆ ನಿರ್ದೇಶಿಸಿ ವಿಚಾರಣೆ ಮುಂದೂಡಿದೆ. ಈ ಹಿಂದೆ ವಿಚಾರಣೆ ನಡೆಸಿದ ವಿಭಾಗೀಯ ಪೀಠ, ಇಂತಹ ಪ್ರಕರಣಗಳನ್ನು ಸರ್ಕಾರ ನಿರ್ವಹಣೆ ಮಾಡುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಜಾರಿಗೊಳಿಸಿರುವ ನಿಯಮಾವಳಿ ಕುರಿತು ಮಾಹಿತಿ ನೀಡುವಂತೆ ಸೂಚಿಸಿತ್ತು.

ಮಾನವ ಕಳ್ಳಸಾಗಣೆಗೆ ಸಂಬಂಧಿಸಿದಂತೆ ರಾಜ್ಯ 4ನೇ ಸ್ಥಾನದಲ್ಲಿದ್ದು, ರಾಜ್ಯದಲ್ಲಿ ನ.2013 ರಿಂದ ನ.2014ರವರೆಗೆ ಪೊಲೀಸರು 11,969 ಪ್ರಕರಣ ದಾಖಲಿಸಿದ್ದಾರೆ. ಇದೊಂದು ಆತಂಕಕಾರಿ ಬೆಳವಣಿಗೆ ಆಗಿದ್ದು ಇದನ್ನು ತಡೆಗಟ್ಟುವಂತೆ ಸರ್ಕಾರಕ್ಕೆ ಸೂಕ್ತ ಮಾರ್ಗದರ್ಶನ ನೀಡಬೇಕು. ಈಗಾಗಲೇ ಜಾರಿಯಲ್ಲಿರುವ ಐಟಿಪಿಎ, ಪೋಕ್ಸೊ ಕಾಯಿದೆ ಬಲ ಪಡಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು. ಪ್ರಕರಣದ ತನಿಖೆ, ಪ್ರಾಸಿಕ್ಯೂಷನ್ ಮತ್ತು ಸಂತ್ರಸ್ತರ ಪುನರ್ವಸತಿ ವ್ಯವಸ್ಥೆ ಕುರಿತು ವಿಶೇಷವಾದ ಗಮನಹರಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕೆಂದು ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು.

SCROLL FOR NEXT