ಮಂಗಳೂರು: ಲೋಕಸಭೆ ಮತ್ತು ಹಲವು ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಪಕ್ಷದ ಎದುರು ದಯನೀಯ ಸೋಲು ಕಂಡಿರುವ ಕಾಂಗ್ರೆಸ್ ಇದೀಗ ಹಿಂದೂ ಸಮುದಾಯವನ್ನು ಓಲೈಸಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ. ಪಕ್ಷದ ಸಂಘಟನೆಯಲ್ಲಿ ಮೇಲ್ಜಾತಿಯ ಹಿಂದೂಗಳನ್ನು ಸೇರಿಸಿಕೊಳ್ಳುವಂತೆ ಸಲಹೆಯನ್ನು ರಾಜ್ಯ ಘಟಕಗಳಿಗೆ ಕಾಂಗ್ರೆಸ್ ಹೈಕಮಾಂಡ್ ನೀಡಿದೆ ಎಂದು ತಿಳಿದು ಬಂದಿದೆ.
ಅಖಿಲ ಭಾರತೀಯ ಕಾಂಗ್ರೆಸ್ ಸಮಿತಿಯ ಸದಸ್ಯ ಹಾಗೂ ಮಾಜಿ ರಕ್ಷಣಾ ಸಚಿವ ಎ ಕೆ ಆಂಟನಿ ಈ ಯೋಜನೆಯ ರುವಾರಿಯಾಗಿದ್ದು ಕಾಂಗ್ರೆಸ್ ಹೈಕಮಾಂಡ್ ಇದಕ್ಕೆ ಒಪ್ಪಿಗೆ ನೀಡಿದೆ ಎಂದು ರಾಜ್ಯ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ತಿಳಿಸಿದ್ದಾರೆ.
ಈ ಸೂಚನೆಯ ಹಿನ್ನಲೆಯಲ್ಲಿ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ಹಿಂದೂ ಮೇಲ್ಜಾತಿಗಳಾದ ಬ್ರಾಹ್ಮಣ ಮತ್ತು ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದವರನ್ನು ಪತ್ತೆಹಚ್ಚತೊಡಗಿದ್ದಾರೆ. ಇದರ ಉದ್ದೇಶ ಬಿಜೆಪಿಯ ಅಂಗ ಸಂಸ್ಥೆಯಾದ ವಿ ಎಚ್ ಪಿ ಗೆ ಪರ್ಯಾಯವಾಗಿ ಭಾರತೀಯ ಹಿಂದೂ ಸಮಾಜ (ಬಿ ಎಚ್ ಎಸ್) ಸಂಸ್ಥೆಯನ್ನು ಕಟ್ಟುವುದು. ಇದು ಪಕ್ಷದ ಹಿಂದುಗಳ ಹಿತದೃಷ್ಟಿಯನ್ನು ಕಾಪಾಡುತ್ತದೆ ಎನ್ನಲಾಗಿದೆ.
ಕರಾವಳಿ ಪ್ರದೇಶದಲ್ಲಿ ಅತಿ ಹೆಚ್ಚು ಸಂಖ್ಯೆಯ ಮೇಲ್ಜಾತಿಯ ಹಿಂದೂ ಮತದಾರರು ಇರುವುದರಿಂದ, ಬಿ ಎಚ್ ಎಸ್ ಅಧ್ಯಕ್ಷಗಾಥೆಗೆ ಈಗಾಗಲೇ ಹುಡುಕಾಟ ಪ್ರಾರಂಭವಾಗಿದೆ ಎಂದು ಪಕ್ಷದ ಹಿರಿಯ ನಾಯಕರು ತಿಳಿಸಿದ್ದಾರೆ. ಇದರ ಬಗ್ಗೆ ಪ್ರತಿಕ್ರಿಯೆ ನೀಡಲು ಕಾಂಗ್ರೆಸ ನಾಯಕಿ ಶಂಕುತಲಾ ಶೆಟ್ಟಿ ಅವರನ್ನು ಪ್ರಶ್ನಿಸಿದಾಗ, "ನಾನು ಪಕ್ಷದ ಸಭೆಗಳಲ್ಲಿ ಕೇಳಿಸಿಕೊಂಡಿರುವಂತೆ ಜಾತ್ಯಾತೀತ ಸಮಾಜ ಕಟ್ಟಲು ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯಬೇಕೆಂಬ ಸಂದೇಶ ಅಷ್ಟೇ. ಬಹುಸಂಖ್ಯಾತರಿಗಾಗಿ ಯಾವುದೇ ಸಂಘಟನೆಯ ಬಗ್ಗೆ ನನಗೆ ತಿಳಿದಿಲ್ಲ" ಎಂದಿದ್ದಾರೆ. ಅರಣ್ಯ ಸಚಿವ ರಮಾನಾಥ ರೈ ಕೂಡ ಇದನ್ನು ಅಲ್ಲಗೆಳೆದಿದ್ದಾರೆ.