ಜಿಲ್ಲಾ ಸುದ್ದಿ

ಸರ್ಕಾರಕ್ಕೇ ಸತೀಶ್ ಸಡ್ಡು

Lakshmi R

ಬೆಂಗಳೂರು: 'ಸಕ್ಕರೆ ಉದ್ಯಮ ಚಾರಿಟೆಬಲ್ ಟ್ರಸ್ಟ್ ಅಲ್ಲ, ಅದು ವ್ಯಾಪಾರ' ಎಂದು ಸರ್ಕಾರದ ವಿರುದ್ಧವೇ ಸಡ್ಡು ಹೊಡೆದಿರುವ ಅಬಕಾರಿ ಸಚಿವ ಸತೀಶ್ ಜಾರಕಿಹೊಳಿ, 'ನನಗೆ ಈಗ ಕೊಟ್ಟಿರುವ ಖಾತೆಯಲ್ಲಿ ತೃಪ್ತಿ ಇಲ್ಲ' ಎಂದೂ ಹೇಳುವ ಮೂಲಕ ಒಂದೇ ದಿನ ಎರಡು ಅಸಮಾಧಾನ ಸ್ಫೋಟಿಸಿದ್ದಾರೆ.

'ನನ್ನ ವ್ಯಕ್ತಿತ್ವ ಮತ್ತು ಹೋರಾಟದ ಹಿನ್ನೆಲೆಗೆ ಅಬಕಾರಿ ಖಾತೆ ಸೂಕ್ತವಲ್ಲ. ಅಧಿಕಾರಕ್ಕೆ ಬಂದ ದಿನದಿಂದಲೂ ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಖಾತೆ ಬದಲಾವಣೆ ಮಾಡುವಂತೆ ಹಲವು ಬಾರಿ ಮನವಿ ಮಾಡಿದ್ದೇನೆ.

ಸೂಕ್ತ ಸಂದರ್ಭ ಬಂದಾಗ ಬೇರೆ ಜವಾಬ್ದಾರಿ ಕೊಡುವ ಭರವಸೆ ನೀಡಿದ್ದಾರೆ. ಹೀಗಾಗಿ ಸಂಪುಟ ಪುನಾರಚನೆ ವೇಳೆ ನನಗೆ ಬೇರೆ ಖಾತೆ ಸಿಗುತ್ತದೆ ಎಂಬ ವಿಶ್ವಾಸವಿದೆ' ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಸಕ್ಕರೆ ವಿಚಾರದಲ್ಲಂತೂ ತುಸು ಖಾರವಾಗಿಯೇ ಮಾತನಾಡಿರುವ ಜಾರಕಿಹೊಳಿ, ರೈತರ ಪ್ರತಿಭಟನೆ ಬಗ್ಗೆ ಮಾತನಾಡುವವರು ಸಕ್ಕರೆ ಕಾರ್ಖಾನೆ ಮಾಲೀಕರೂ ಬೀದಿಗೆ ಇಳಿದು ಹೋರಾಟ ಮಾಡಬೇಕೆಂದು ಬಯಸುತ್ತಾರಾ? ಎಂದು ಪ್ರಶ್ನಿಸಿದ್ದಾರೆ.

ಅವರು ಹೇಳಿದ್ದಿಷ್ಟು: 'ರೈತರಿಗೆ ಪ್ರತಿ ಟನ್ ಕಬ್ಬಿಗೆ ರೂ.2,500 ಕೊಡಿಸಬೇಕೆಂಬ ಸರ್ಕಾರದ ನಿರ್ಧಾರಕ್ಕೆ ನನ್ನ ವಿರೋಧವಿಲ್ಲ. ಆದರೆ ಸಕ್ಕರೆ ಕಾರ್ಖಾನೆ ಮಾಲೀಕರು ಮಾತ್ರ ದುಡ್ಡು ಕೊಟ್ಟಿಲ್ಲ ಎಂಬ ವಿಚಾರವನ್ನು ಏಕೆ ದೊಡ್ಡದು ಮಾಡುತ್ತೀರಿ? ಬೇರೆ ಉದ್ಯಮಕ್ಕೂ ಇದು ಅನ್ವಯವಾಗುತ್ತದೆ. ಬೇಡಿಕೆ ಮತ್ತು ಪೂರೈಕೆ ಪ್ರಮಾಣ ಆಧರಿಸಿ ಸಕ್ಕರೆ ಬೆಲೆ ನಿಗದಿಯಾಗುತ್ತದೆ?'

'ನಾನು ಸಕ್ಕರೆ ಕಾರ್ಖಾನೆ ಮಾಲೀಕನಲ್ಲ. ಹಾಗೆ ಆರೋಪಿಸುವವರ ಬಳಿ ದಾಖಲೆ ಇದೆಯಾ? ಕಾರ್ಖಾನೆಯಲ್ಲಿ ಷೇರು ಇದ್ದ ಮಾತ್ರಕ್ಕೆ ಮಾಲೀಕರಾಗುತ್ತಾರಾ? ಹಾಗೆ ನೋಡಿದರೆ ನನ್ನ ಹಾಗೆ ಕಾರ್ಖಾನೆಯಲ್ಲಿ ಷೇರು ಹೊಂದಿರುವವರು ಬಹಳಷ್ಟು ಸಚಿವರಿದ್ದಾರೆ.'
ಪ್ರಸ್ತುತ ಸನ್ನಿವೇಶದಲ್ಲಿ ರೈತರು ಪರ್ಯಾಯ ಬೆಳೆ ಬೆಳೆಯಬೇಕು. ಕೇವಲ ಕಬ್ಬನ್ನೊಂದೇ ಬೆಳೆಯಬಾರದು. ಪರ್ಯಾಯ ಬೆಳೆಯಿಂದ ಅವರಿಗೆ ಹೆಚ್ಚು ಲಾಭವಾಗುತ್ತದೆ.

SCROLL FOR NEXT