ಜಿಲ್ಲಾ ಸುದ್ದಿ

ಪಿಯುಗೆ ಬ್ಲೋ-ಅಪ್ ಸಿಲೇಬಸ್ ಬಳಕೆ

Lakshmi R

ಬೆಂಗಳೂರು: ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗಕ್ಕೆ ಈ ಬಾರಿ ಬ್ಲೋ-ಅಪ್ ಸಿಲೆಬಸ್ ಬಳಸುತ್ತೇವೆ ಹಾಗೂ ಪೂರ್ಣ ಪಠ್ಯಪುಸ್ತಕ ಆಧರಿಸಿ ಪರೀಕ್ಷೆ ನಡೆಸುವುದಿಲ್ಲ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ.

ಮಾಧ್ಯಮ ಹಾಗೂ ವಿದ್ಯಾರ್ಥಿ ವಲಯದಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಡಿ.31ರಂದು ಹೊರಡಿಸಿದ್ದ ಆದೇಶವನ್ನು ಹಿಂಪಡೆಯಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಪೂರ್ಣ ಪಠ್ಯವಸ್ತು ಪೂರ್ವ ಸಿದ್ದತೆ ಅಥವಾ ವಾರ್ಷಿಕ ಪರೀಕ್ಷೆಗೆ ಪರಿಗಣಿಸುವುದಿಲ್ಲ.

ಆದರೆ ಮುಂದಿನ ಶೈಕ್ಷಣಿಕ ವರ್ಷದಿಂದ ಪೂರ್ಣ ಪಠ್ಯಪುಸ್ತಕ ಆಧರಿಸಿಯೇ ಪರೀಕ್ಷೆ ನಡೆಸುವುದಾಗಿ ಮಂಗಳವಾರ ಹೊರಡಿಸಿದ ಆದೇಶದಲ್ಲಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ವಿದ್ಯಾರ್ಥಿಗಳ ನಿದ್ದೆಗೆಡಿಸಿದ ಪಪೂ ಇಲಾಖೆ ಎಂಬ ವರದಿಯು ಜ.4ರಂದು ವರದಿಯಾಗಿತ್ತು. ಆ ಬಳಿಕ ವಿದ್ಯಾರ್ಥಿ ಸಂಘಟನೆಗಳು ಬೀದಿಗಿಳಿದಿದ್ದವು. ಆದರೆ ತನ್ನ ಮೊಂಡುತನ ಮುಂದುವರಿಸಿದ್ದ ಶಿಕ್ಷಣ ಇಲಾಖೆ, ಬ್ಲೋ-ಅಪ್ ಸಿಲೇಬಸ್ ಬಳಸದಿರಲು ನಿರ್ಧರಿಸಿತ್ತು. ಆದರೆ ಉಪನ್ಯಾಸಕ ವರ್ಗ ತರಗತಿಗಳನ್ನು ಬಹಿಷ್ಕಾರ ಹಾಕುವ ಎಚ್ಚರಿಕೆ ಹಾಕಿದ ಪರಿಣಾಮ ಆದೇಶ ಹಿಂಪಡೆಯಲು ಹಿರಿಯ ಅಧಿಕಾರಿಗಳು ನಿರ್ಧರಿಸಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆಯ ಹಿಂದಿನ ಕ್ರಮದಿಂದ ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ ಹಾಗೂ ಜೀವಶಾಸ್ತ್ರ ವಿಷಯದ ಪ್ರತಿ ಅಧ್ಯಾಯದಲ್ಲಿಯೂ ನಾಲ್ಕೈದು ಅಂಶಗಳನ್ನು ವಿದ್ಯಾರ್ಥಿಗಳಿಗೆ ಕಲಿಸಿರಲಿಲ್ಲ. ಪೂರ್ವ ಸಿದ್ದತೆ ಪರೀಕ್ಷೆಗೆ ಎರಡು ವಾರವಿರುವಾಗ ನಿಯಮ ಬದಲಿಸಿದರೆ ವಿದ್ಯಾರ್ಥಿಳಿಗೆ ಸಮಸ್ಯೆಯಾಗುತ್ತಿತ್ತು.

ಶಿಕ್ಷಣ ಇಲಾಖೆ ಈ ಕ್ರಮಕ್ಕೆ ವಿದ್ಯಾರ್ಥಿ ಸಂಘಟನೆಗಳು ಸ್ವಾಗತಿಸಿವೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಪೂರ್ಣ ಪಠ್ಯವಸ್ತು ಪರಿಗಣಿಸುವ ಮುಂಚೆ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರ ಜತೆ ಸಮಾಲೋಚಿಸುವಂತೆಯೂ ವಿದ್ಯಾರ್ಥಿ ಸಂಘಟನೆಗಳು ಆಗ್ರಹಿಸಿವೆ.

SCROLL FOR NEXT