ಜಿಲ್ಲಾ ಸುದ್ದಿ

ಎಂಎಸ್‌ಐಎಲ್‌ನಿಂದ ಕುಡಿಯುವ ನೀರು, ಔಷಧ ಮಳಿಗೆ ಶೀಘ್ರ ಆರಂಭ

Lakshmi R

ಮೈಸೂರು: ಬಾಟಲಿ ಮತ್ತು ಪೊಟ್ಟಣದಲ್ಲಿ ಕುಡಿಯುವ ನೀರು ಮಾರಾಟ ಮತ್ತು ಔಷಧ ಮಳಿಗೆಗಳನ್ನು ತೆರೆಯಲು ಎಂಎಸ್‌ಐಎಲ್ ತೀರ್ಮಾನಿಸಿದೆ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಎಂಎಸ್‌ಐಎಲ್ ಅಧ್ಯಕ್ಷ ಅನಿಲ್‌ಕುಮಾರ್, ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ರಾಜ್ಯಾದ್ಯಂತ 400 ಚಿಲ್ಲರೆ ಲಿಕ್ಕರ್ ಕೇಂದ್ರ ತೆರೆಯಲಾಗಿದ್ದು, ಸದ್ಯದಲ್ಲಿಯೆ 65 ಹೊಸ ಕೇಂದ್ರಗಳನ್ನು ತೆರೆಯಲಾಗುವುದು. ಎಂಎಸ್‌ಐಎಲ್ ಚಿಟ್ ಫಂಡ್ಸ್ ಅನ್ನು ರಾಜ್ಯದ ಎಲ್ಲ ನಗರ ಮತ್ತು ತಾಲೂಕು ಕೇಂದ್ರಗಳಿಗೂ ವಿಸ್ತರಿಸುವ ಗುರಿ ಹೊಂದಲಾಗಿದೆ.

ಈ ಸಂಬಂಧ ಪ್ರಾಂಚೈಸಿಗಳನ್ನು ಹುಡುಕಲಾಗುತ್ತಿದೆ ಎಂದು ಹೇಳಿದರು. ರಾಜ್ಯದಲ್ಲಿ ಲೇಖಕ್ ಮತ್ತು ವಿದ್ಯಾನೋಟ್ ಪುಸ್ತಕಗಳನ್ನು ತಯಾರಿಸಿ ಸರ್ಕಾರಿ ಶಾಲಾ ಮಕ್ಕಳಿಗೆ ರಿಯಾಯಿತಿ ದರದಲ್ಲಿ ನೀಡಲು ತೀರ್ಮಾನಿಸಲಾಗಿದೆ. ಕರ್ನಾಟಕ ಎಲೆಕ್ಟ್ರಿಕಲ್ ಕೇಬಲ್ಸ್‌ಗಳ ಮಾರಾಟ ಹೆಚ್ಚಿಸಲು ಕ್ರಮ ವಹಿಸಲಾಗಿದೆ.

ಈಗಾಗಲೇ ರೂ.40 ಕೋಟಿ ಮೊತ್ತದ ಕೇಬಲ್ ತಯಾರಿಕೆಗೆ ಕೋರಿಕೆ ಬಂದಿದೆ. ಮುಂಬೈ ಮತ್ತು ದೆಹಲಿ ಕಚೇರಿಯಲ್ಲಿ ಪ್ರವಾಸೋದ್ಯಮ ಪ್ರೋತ್ಸಾಹಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ಶಾಲಾ ಮಕ್ಕಳಿಗೆ ಕಡಿಮೆ ದರದಲ್ಲಿ ಕರ್ನಾಟಕ ದರ್ಶನ ಪ್ರವಾಸ ಕಾರ್ಯಕ್ರಮವನ್ನು ಪರಿಚಯಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

SCROLL FOR NEXT