ಜಿಲ್ಲಾ ಸುದ್ದಿ

ಶಾಂತಿನಗರ ಹೌಸಿಂಗ್ ಸೊಸೈಟಿ ಹಗರಣ ದೊಡ್ಡ ಹಗರಣಗಳಲ್ಲಿ ಒಂದು: ಎಟಿ ರಾಮಸ್ವಾಮಿ

Srinivasamurthy VN

ಬೆಂಗಳೂರು: ದೇಶದಲ್ಲೇ ದೊಡ್ಡ ಹಗರಣಗಳೆಂದು ಹೇಳಲಾಗುತ್ತಿರುವ ಶಾರದಾ ಚಿಟ್ ಫಂಡ್ ಹಗರಣ ಮತ್ತು ಆದರ್ಶ ಹೌಸಿಂಗ್ ಹಗರಣಗಳಿಗಿಂತಲೂ ಭಾರಿ ಪ್ರಮಾಣದ ಹಗರಣ ಕರ್ನಾಟಕದಲ್ಲಿ ನಡೆದಿದೆ ಎಂದು ಮಾಜಿ ಶಾಸಕ ಎಟಿ ರಾಮಸ್ವಾಮಿ ಆರೋಪಿಸಿದ್ದಾರೆ.

ಬೆಂಗಳೂರಿನ ಶಾಸಕರ ಭವನದಲ್ಲಿ ಇಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಮಸ್ವಾಮಿ ಅವರು, ಶಾಂತಿನಗರ ಗೃಹ ನಿರ್ಮಾಣ ಸೊಸೈಟಿ ಹಗರಣವು ಕರ್ನಾಟಕದ ಅತಿದೊಡ್ಡ ಹಗರಣವಾಗಿದೆ. ಪಶ್ಚಿಮ ಬಂಗಾಳದ ಶಾರದಾ ಚಿಟ್ ಫಂಡ್ ಹಗರಣ ಮತ್ತು ಮಹಾರಾಷ್ಟ್ರದ ಆದರ್ಶ ಹೌಸಿಂಗ್ ಹಗರಣಗಳಿಗಿಂತಲೂ ಭಾರಿ ಪ್ರಮಾಣದಲ್ಲಿ ಶಾಂತಿನಗರ ಗೃಹ ನಿರ್ಮಾಣ ಸೊಸೈಟಿ ಹಗರಣದಲ್ಲಿ ಅಕ್ರಮವೆಸಗಲಾಗಿದೆ ಎಂದು ಅವರು ಹೇಳಿದರು.

ಹಗರಣ ಸಂಬಂಧ 2 ಸಂಘಗಳ ಬ್ಯಾಂಕ್ ಅವ್ಯವಹಾರಗಳ ಬಗ್ಗೆ ತನಿಖೆಯಾಗಬೇಕು. ಕೆಲ ವ್ಯಕ್ತಿಗಳು ಅಕ್ರಮವಾಗಿ ಸೈಟ್ ಪಡೆದಿದ್ದು, ಸರ್ಕಾರ ಮಾತ್ರ ಈ ಬಗ್ಗೆ ಅರಿವಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಹಗರಣದಲ್ಲಿ ಸುಮಾರು 1,456 ಕೋಟಿ ಮೌಲ್ಯದ ಭೂಮಿಯನ್ನು ಅಕ್ರಮವಾಗಿ ಹಂಚಿಕೆ ಮಾಡಲಾಗಿದ್ದು, ನೈಜ ಮತ್ತು ಬೋಗಸ್ ಸಂಸ್ಥೆಗಳ ವಿರುದ್ಧ ತನಿಖೆಯಾಗಬೇಕು ಎಂದು ರಾಮಸ್ವಾಮಿ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಹಿರಿಯ ಸ್ವತಂತ್ರ್ಯ ಹೊರಾಟಗಾರ ಎಚ್‌ಎಸ್ ದೊರೆಸ್ವಾಮಿ ಅವರು ಕೂಡ ಉಪಸ್ಥಿತರಿದ್ದರು.

ಸಚಿವ ಡಿಕೆಶಿಗೂ ಹಗರಣದ ನಂಟು: ರಾಮಸ್ವಾಮಿ ಆರೋಪ
ಈ ಹಿಂದೆ ಇದೇ ಶಾಂತಿನಗರ ಹೌಸಿಂಗ್ ಸೊಸೈಟಿಯಲ್ಲಿ ಇಂಧನ ಸಚಿವ ಡಿಕೆ ಶಿವಕುಮಾರ್ ಅವರೂ ಪಾಲುದಾರರಾಗಿದ್ದಾರೆ ಎಂದು ಆರೋಪಿಸಿದ್ದ ರಾಮಸ್ವಾಮಿ ಅವರು ಹಿರಿಯ ಸ್ವತಂತ್ರ ಹೋರಾಟಗಾರ ಎಚ್‌ಎಸ್ ದೊರೆಸ್ವಾಮಿ ಅವರ ನೇತೃತ್ವದಲ್ಲಿ ಸಹಕಾರ ಸಚಿವ ಮಹದೇವ ಪ್ರಸಾದ್ ಅವರ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು.

ಈ ವೇಳೆ, 'ಹಗರಣದಲ್ಲಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಕುಟುಂಬ ಸದಸ್ಯರ ಹೆಸರಿನಲ್ಲಿ 197 ನಿವೇಶನಗಳು ನೋಂದಣಿಯಾಗಿವೆ. ಅನಿವಾಸಿ ಭಾರತೀಯರಿಂದ ಹಿಡಿದು ಹಲವರಿಗೆ ನಿವೇಶನ ನೀಡಲಾಗಿದೆ. ಯಾವ ಕಾರಣಕ್ಕೂ ಪ್ರಕರಣ ಮುಚ್ಚಲು ಅವಕಾಶ ನೀಡಬಾರದು. ಉನ್ನತ ತನಿಖೆ ನಡೆಸಬೇಕು' ಎಂದು ರಾಮಸ್ವಾಮಿ ಒತ್ತಾಯಿಸಿದ್ದರು.

SCROLL FOR NEXT