ಜಿಲ್ಲಾ ಸುದ್ದಿ

ಕಲಬೆರೆಕೆ ಹಾಲು ಕಡಿವಾಣಕ್ಕೆ ಕ್ರಮ

Rashmi Kasaragodu

ಬೆಂಗಳೂರು: ರಾಜ್ಯಕ್ಕೆ ತಮಿಳುನಾಡಿನಿಂದ ಕಲಬೆರಕೆ ಹಾಲು ಸರಬರಾಜಾಗುತ್ತಿದ್ದು, ಸರ್ಕಾರ ಹಾಗೂ ಬಿಬಿಎಂಪಿ ಹೆಚ್ಚಿನ ಕ್ರಮ ಕೈಗೊಳ್ಳಬೇಕಿದೆ ಎಂದು ಜಿಲ್ಲಾ
ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಬಮೂಲ್‍ಗೆ 50 ವರ್ಷ ತುಂಬಿದ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಬೆಂಗಳೂರು ಡೇರಿ ಸಂಸ್ಥಾಪನೆ ಹಾಗೂ ಸುವರ್ಣ ಸಂವತ್ಸರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಮೂಲ್‍ನಿಂದ ನಿತ್ಯ 13 ಲಕ್ಷ ಲೀ.ಹಾಲು ಸರಬರಾಜಾಗುತ್ತಿದ್ದು, ರು 2ಸಾವಿರ ಕೋಟಿ ವಹಿವಾಟು ನಡೆಯುತ್ತಿದೆ. 1 ಲಕ್ಷ ಹಾಲು ಉತ್ಪಾದಕರು ಇದೇ ವಹಿವಾಟನ್ನು
ಅವಲಂಬಿಸಿದ್ದು, ರೈತರಿಗೆ ಹೆಚ್ಚು ಅನುಕೂಲವಾಗಿದೆ. ಆದರೆ, ಪಕ್ಕದ ರಾಜ್ಯಗಳಿಂದ ನಗರಕ್ಕೆ ಕಲಬೆರಕೆ ಹಾಲು ಬರುತ್ತಿದ್ದು, ಹಿಂದೊಮ್ಮೆ ಕಡಿವಾಣ ಹಾಕಲಾಗಿತ್ತು. ಈಗ ತಮಿಳುನಾಡಿನಿಂದ ಅಧಿಕ ಪ್ರಮಾಣದಲ್ಲಿ ಕಲಬೆರಕೆ ಹಾಲು ಸರಬರಾಜಾಗುತ್ತಿದೆ. ಹಿರಿಯರಿಗಿಂತ ಮೊದಲು ಮಕ್ಕಳ ಆರೋಗ್ಯದ ಮೇಲೆ ಇದರಿಂದ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಸರ್ಕಾರ ಹಾಗೂ ಬಿಬಿಎಂಪಿ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕಿದೆ ಎಂದರು.
ಬಮೂಲ್‍ನಿಂದ ರೈತರಿಗೆ ನೀಡುತ್ತಿರುವ ಪಶುಗಳ ಆಹಾರ ಅಗತ್ಯ ಪೌಷ್ಠಿಕಾಂಶಗಳಿಂದ ಕೂಡಿದೆ. ಹಾಲು ಉತ್ಪಾದನಾ ಉದ್ಯಮಕ್ಕೆ ಸಾಕಷ್ಟು ಪ್ರೋತ್ಸಾಹ ನೀಡುತ್ತಿದ್ದು, ಬಮೂಲ್‍ಗೆ ರು. 190 ಕೋಟಿ ಸಹಾಯಧನ ನೀಡಲಾಗುತ್ತಿದೆ ಎಂದರು.

ಬೆಣ್ಣೆ ಮಾರಾಟ: ಕರ್ನಾಟಕ ಹಾಲು ಮಹಾ ಮಂಡಳಿ ಅಧ್ಯಕ್ಷ ಪಿ.ನಾಗರಾಜು ಮಾತನಾಡಿ, ಬಮೂಲ್‍ನಲ್ಲಿ ನಿತ್ಯ ಬೆಣ್ಣೆ ಶೇಖರಿಸುವ ಕೋಣೆಗೆ ತಿಂಗಳಿಗೆ ರು.3ಕೋಟಿ ಪಾವತಿ
ಸಲಾಗುತ್ತಿದೆ. ದಿನಕ್ಕೆ 20-30 ಟನ್  ಮಾಡುವ ಬದಲು ದೊಡ್ಡ ಪ್ರಮಾಣದಲ್ಲಿ ಬೆಣ್ಣೆ  ಮಾರಾಟವಾದರೆ ಬಾಡಿಗೆ ಹೊರೆ ಕಡಿಮೆಯಾಗಲಿದೆ. ತಮಿಳುನಾಡಿನಿಂದ ಬರುವ ಉದ್ಯಮಿಗಳು ನಗರದಲ್ಲೇ ಬೆಣ್ಣೆ ಖರೀದಿಸಿ ತಮ್ಮ ಊರಿನಲ್ಲಿ ತುಪ್ಪ ಮಾಡಿ ಮತ್ತೆ ನಗರಕ್ಕೆ ತಂದುಹೆಚ್ಚಿನ ದರದಲ್ಲಿ ಮಾರುತ್ತಾರೆ. ಸರ್ಕಾರ ಇದಕ್ಕೆ ಕಡಿವಾಣ ಹಾಕಬೇಕಿದೆ ಎಂದರು.
ಸಹಕಾರ ಹಾಲು ಒಕ್ಕೂಟದ ಅಧ್ಯಕ್ಷ ಕೆ.ರಮೇಶ್  ಮಾತನಾಡಿ, ನಗರದಲ್ಲಿ ನೂತನ `ಹಾಲು ಉತ್ಪಾದಕ ಡೇರಿ' ಹಾಗೂ ರಾಮನಗರದಲ್ಲಿ `ಮೆಗಾಡೇರಿ' ಮಾಡಲು ಭೂಮಿ ಗುರುತಿಸಲಾಗಿದೆ. ಈ ಪ್ರದೇಶ ಗಳಲ್ಲಿ ಕುಡಿಯುವ ನೀರು, ವಿದ್ಯುತ್, ಸಾರಿಗೆ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ಒಕ್ಕೂಟದ ವ್ಯಾಪ್ತಿಗೆ ಬರುವ ಎಲ್ಲ ತಾಲೂಕುಗಳಲ್ಲಿ ಶಿಬಿರ ಕಚೇರಿಗಳನ್ನು ಆರಂಭಿಸಲಾಗುತ್ತಿದೆ. ಆನೇಕಲ್, ದೊಡ್ಡಬಳ್ಳಾಪುರ ಹಾಗೂ ದೇವನಹಳ್ಳಿಯಲ್ಲಿ ಶಿಬಿರ ಕಚೇರಿ ನಿರ್ಮಾಣ  ಪೂರ್ಣವಾಗಿದೆ. ತಮಿಳುನಾಡಿನಲ್ಲಿ `ನಂದಿನಿ ಹಾಲು ಮಾರಾಟಕ್ಕೆ ಚಾಲನೆ ನೀಡಲಾಯಿತು. ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಎ.ಎಸ್.ಪ್ರೇಮನಾಥ್, ಸಹಕಾರ ಸಂಘಗಳ ಅಪರ ನಿಬಂಧಕ ಓಂಪ್ರಕಾಶ್, ನಟಿ ಶಿರಿನ್ ಶೃಂಗಾರ್, ಬಮೂಲ್ ವ್ಯವಸ್ಥಾಪಕ ನಿರ್ದೇಶಕ ಡಾ.ಟಿ. ಗುರುಲಿಂಗಯ್ಯ ಹಾಜರಿದ್ದರು.


ಪತಂಜಲಿ ಸಂಸ್ಥೆಗೆ 2 ಲಕ್ಷ ಲೀ. ಬೆಣ್ಣೆ ಇತ್ತೀಚೆಗೆ ಯೋಗ ಗುರು ಬಾಬಾ ರಾಮ್ ದೇವ್ ಅವರ ಪತಂಜಲಿ ಸಂಸ್ಥೆ 4 ಲಕ್ಷ ಲೀ. ಬೆಣ್ಣೆ ಖರೀದಿಗೆ ಕೇಳಿದ್ದು, ಸದ್ಯಕ್ಕೆ 2 ಲಕ್ಷ ಲೀ.ಬೆಣ್ಣೆ ಸರಬರಾಜು ಮಾಡಲು ಮಾತುಕತೆ ನಡೆದಿದೆ.

-ಟಿ ಪಿ.ನಾಗರಾಜು,
ಕರ್ನಾಟಕ ಹಾಲು
ಮಹಾ ಮಂಡಳಿ ಅಧ್ಯಕ್ಷ

SCROLL FOR NEXT