ಬೆಂಗಳೂರು: ಮನೆಯೊಂದಕ್ಕೆ ನುಗ್ಗಿ ಕಳ್ಳತನಕ್ಕೆ ಯತ್ನಿಸಿದ ಪಶ್ಚಿಮಬಂಗಾಳ ಮೂಲದ ಇಬ್ಬರು ಮನೆಗಳ್ಳರ ಮೇಲೆ ಪೊಲೀಸರು ಗುಂಡು ಹಾರಿಸಿರುವ ಘಟನೆ ಮಂಗಳವಾರ ಬೆಳಿಗ್ಗೆ ನಗರದ ವಿದ್ಯಾರಣ್ಯಪುರದಲ್ಲಿ ನಡೆದಿದೆ.
ವಿದ್ಯಾರಣ್ಯಪುರದ ಸಪ್ತಗಿರಿ ಲೇಔಟ್‌ನಲ್ಲಿ ಘಟನೆ ನಡೆದಿದ್ದು, ಆರೋಪಿಗಳನ್ನು ಮಿಥುನ್(26) ಮತ್ತು ಅಖಿಲ್(36) ಎಂದು ಗುರುತಿಸಲಾಗಿದೆ.
ಸಪ್ತಗಿಕಿ ಲೇಔಟ್‌ನ ನಿವಾಸಿ ಮುರುಳಿ ಮನೋಹರ್ ಎಂಬುವವರು ಕಳೆದ ಮೂರು ದಿನಗಳಿಂದ ಮನೆಯಲ್ಲಿರಲಿಲ್ಲ. ಈ ಸಮಯವನ್ನೇ ಹೊಂಚು ಹಾಕುತ್ತಿದ್ದ ಇಬ್ಬರು ಕಳ್ಳರು, ಇಂದು ಮುಂಜಾನೆ 5.15ರ ಸುಮಾರಿಗೆ ಮನೆಗೆ ನುಗ್ಗಿ ಕಳ್ಳತನಕ್ಕೆ ಮುಂದಾಗಿದ್ದಾರೆ.
ಈ ಮಾಹಿತಿ ತಿಳಿಯುತ್ತಿದ್ದಂತೆ ವಿದ್ಯಾರಣ್ಯಪುರ ಪೊಲೀಸರು ಸ್ಥಳಕ್ಕೆ ಆಗಮಿಸಿ, ಕಳ್ಳರನ್ನು ಹಿಡಿಯಲು ಯತ್ನಿಸಿದ್ದಾರೆ. ಈ ವೇಳೆ ಇಬ್ಬರು ಮನೆಗಳ್ಳರು ಪೇದೆ ನಾಗಭೂಷಣ್ ಕೈಗೆ ರಾಡ್‌ನಿಂದ ಹೊಡೆದು ಹಲ್ಲೆ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ಇನ್ಸ್‌ಪೆಕ್ಟರ್ ಪುನೀತ್ ಅವರು ಮನೆಗಳ್ಳರ ಮೇಲೆ ಮೂರು ಸುತ್ತು ಗುಂಡು ಹಾರಿಸಿದ್ದಾರೆ. ಕಳ್ಳರ ಕಾಲಿಗೆ ಗುಂಡು ತಗುಲಿದೆ. ಗಾಯಗೊಂಡ ಪೇದೆ ಮತ್ತು ಇಬ್ಬರು ಕಳ್ಳರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.