ಬೆಂಗಳೂರು: ಬಿಬಿಎಂಪಿಯಲ್ಲಿ ನಡೆಯುವ ಆಸ್ತಿಗಳ ಖಾತಾ ನೀಡಿಕೆ ಹಾಗೂ ಕಾಮಗಾರಿಗಳ ಟೆಂಡರ್ ಅಕ್ರಮಗಳ ಭಿನ್ನ ಮುಖಗಳು ಗುರುವಾರ ಕೌನ್ಸಿಲ್ ಸಭೆಯಲ್ಲಿ ಗೋಚರವಾಯಿತು.
ರು.5000ದಿಂದ ರು.50ಸಾವಿರದ ವರೆಗೂ ಹಣ ಪಡೆದು ಖಾತಾ ನೀಡುವಂಥ ವಿವಿಧ ಪ್ರಕರಣಗಳನ್ನು ಆಡಳಿತ ಪಕ್ಷದವರೇ ಬಯಲು ಮಾಡಿದರು. ಇದಕ್ಕೆ ಮೇಯರ್ ಶಾಂತಕುಮಾರಿ ಕೂಡ ಸಾಥ್ ನೀಡಿ, ಕಂದಾಯ ವಿಭಾಗದ ಮೂವರು ಅಧಿಕಾರಿಗಳು ಅಮಾನತುಗೊಳ್ಳುವಂತೆಯೂ ಮಾಡಿದರು. ಆದರೆ ಪ್ರತಿಪಕ್ಷ ಕಾಂಗ್ರೆಸ್ ಅಕ್ರಮಗಳನ್ನು
ಹೊರಗೆಳೆಯಲು ಹಿಂದೆ ಬಿದ್ದಿತು.
ದೊಡ್ಡ ಗುಬ್ಬಲಾಳ, ಭೂಪಸಂದ್ರ ಸೇರಿದಂತೆ ಅನೇಕ ಕಡೆ ಪರಿವರ್ತನೆಯಾಗದಿರುವ ನಿವೇಶನಗಳಿಗೂ ಖಾತಾ ನೀಡಿರುವುದು ಸೇರಿದಂತೆ ಕಂದಾಯ ವಿಭಾಗದ 10ಕ್ಕೂ ಹೆಚ್ಚು ಖಾತಾ ಅಕ್ರಮಗಳನ್ನು ಪದ್ಮನಾಭ ರೆಡ್ಡಿ ಸಭೆಗೆ ತಿಳಿಸಿದರು. ಹೀಗೆ ಅಕ್ರಮ ನಡೆಸುತ್ತಿರುವವರನ್ನು ಎಷ್ಟೇ ಬಾರಿ ವರ್ಗಾವಣೆ ಮಾಡಿದರೂ ಮತ್ತೆ ಆದೇ ಸ್ಥಾನಕ್ಕೆ ಬರುತ್ತಿದ್ದಾರೆ ಎಂದು ಕಂದಾಯ ಅಧಿಕಾರಿ ನಾಗಭೂಷಣ್ ಸೇರಿದಂತೆ ಅನೇಕ ಅಧಿಕಾರಿಗಳ ವಿರುದ್ಧ ದೂರು ನೀಡಿದರು. ಇದನ್ನು ಪರಿಶೀಲಿಸಿದ ಆಯುಕ್ತ ಎಂ.ಲಕ್ಷ್ಮೀನಾರಾಯಣ, ನಾಗಭೂಷಣ್ ಸೇರಿದಂತೆ ಕಂದಾಯ ವಿಭಾಗದ ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಿದರು.
ಬಿಜೆಪಿಯ ಮಹೇಶ್ ಬಾಬು, ಹೊಸೂರು ರಸ್ತೆಯಲ್ಲಿರುವ ಕ್ರೈಸ್ಟ್ ಕಾಲೇಜು ಅಕ್ರಮಗಳನ್ನು ಬಯಲಿಗೆಳೆದರು. ಈ ಕಾಲೇಜು 63 ಎಕರೆ ಜಾಗದಲ್ಲಿ ಸಂಸ್ಥೆ ನಡೆಸುತ್ತಿದ್ದು, ಕಾಲೇಜು
ಕಟ್ಟಡಗಳು, ಬಾಂಕ್‍ಗಳು, ಸಭಾಂಗಣಗಳು, ಹೊಟೇಲ್‍ಗಳು ಸೇರಿದಂತೆ ಅನೇಕ ವಾಣಿಜ್ಯ ಸಂಸ್ಥೆಗಳನ್ನು ನಡೆಸುತ್ತಿದೆ. ಆದರೆ ಇದೆಲ್ಲದಕ್ಕೂ ಕ್ರೈಸ್ಟ್ ಕಾಲೇಜು ನೀಡುತ್ತಿರುವ ಆಸ್ತಿ ತೆರಿಗೆ ಬರೀ ರು.7 ಲಕ್ಷ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್ ಕೂಡಲೇ ಸ್ಥಳ ಪರಿಶೀಲನೆ ನಡೆಸಿ ಅಕ್ರಮದ ವಿರುದಟಛಿ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ವೃಷಭಾವತಿ ನಾಲೆಯ ಇಕ್ಕೆಲಗಳ ಗೋಡೆ ಅಪಾಯದಲ್ಲಿದ್ದು, ಗೋಡೆ ನಿರ್ಮಿಸುವಂತೆ ಬಿಜೆಪಿಯ ಉಮೇಶ್ ಶೆಟ್ಟಿ ಸಾಕಷ್ಟು ಬಾರಿ ಮನವಿ ಸಲ್ಲಿಸಿದರು. ಅದರಂತೆ ರು.5ಲಕ್ಷ ಕಾಮ
ಗಾರಿಗೆ ಟೆಂಡರ್ ಆಹ್ವಾನಿಸಿ ಕಾರ್ಯಾದೇಶವೂ ಆಗಿತ್ತು. ಆದರೆ ಈತನಕ ಕಾಮಗಾರಿ ನಡೆಸದೆ ವಿಳಂಬ ಮಾಡಿರುವುದರಿಂದ ಈಗ ರು.5 ಕೋಟಿ ವೆಚ್ಚದಲ್ಲಿ ಗೋಡೆ ನಿರ್ಮಿಸಬೇಕಾದ ಅನಿವಾರ್ಯ ಬಂದಿದೆ. ಇದಕ್ಕೆ ಹಣ ಎಲ್ಲಿಂದ ತರುವುದು ಎಂದು ರಾಜ ಕಾಲುವೆ ವಿಭಾಗದ ಮುಖ್ಯ ಎಂಜಿನಿಯರ್ ಅನಂತಸ್ವಾಮಿ ವಿರುದ್ಧ ಉಮೇಶ್
ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು.
ಬಿಬಿಎಂಪಿ ಆಯುಕ್ತರ ಅಮ್ಮನ ಆಸ್ತಿಗೆ ಕನ್ನ!
ಬಿಜೆಪಿಯ ಪದ್ಮನಾಭ ರೆಡ್ಡಿ, ಬಿಬಿಎಂಪಿ ಆಯುಕ್ತರ ತಾಯಿಗೆ ಸೇರಿದ ಆಸ್ತಿಯನ್ನು ತಮ್ಮ ಹೆಸರಿಗೆ ಖಾತಾ ಮಾಡಿಸಿಕೊಂಡು ಅಚ್ಚರಿ ಮೂಡಿಸಿದರು. ಬಿಬಿಎಂಪಿಯಲ್ಲಿ ನಕಲಿ ಖಾತಾಗಳನ್ನು ಹೇಗೆಲ್ಲಾ ನಡೆಸುತ್ತಿದ್ದಾರೆ ಎಂದು ಸಾಬೀತು ಮಾಡಿ ತೋರಿಸಲು ಪದ್ಮನಾಭ ರೆಡ್ಡಿ, ಕೇವಲ ರು.5,000 ವೆಚ್ಚ ಮಾಡಿ ನಕಲಿ ಖಾತಾ ಪಡೆದಿದ್ದರು. ಆಯುಕ್ತರ ತಾಯಿ ವೆಂಕಟಮ್ಮ ಅವರ ಹೆಸರಿನಲ್ಲಿರುವ ಬಾಣಸವಾಡಿಯ ಸುಬ್ಬಯ್ಯನ ಪಾಳ್ಯದಲ್ಲಿರುವ 7000ಚ.ಅಡಿ ವಿಸ್ತೀರ್ಣದ ಆಸ್ತಿಯನ್ನು ಪದ್ಮನಾಭ ರೆಡ್ಡಿ ತಮ್ಮ ಹೆಸರಿಗೆ
ಖಾತಾ ಆಗಿರುವ ನಕಲಿ ದಾಖಲೆ ಪಡೆದಿದ್ದರು.
ಆದರೆ ಇದನ್ನು ಹೇಗೆ ಪಡೆದಿದ್ದೀರಿ ಎಂಬ ಸದಸ್ಯರು ಪ್ರಶ್ನೆಗೆ ಅವರು ನಕಲಿ ದಾರಿಯಿಂದ ಪಡೆಯಲಾಗಿದೆ. ಇದೇರೀತಿ ಎಲ್ಲಾ ಕಡೆ ನಡೆಯುತ್ತಿದೆ. ಇದನ್ನು ತಡೆಯಬೇಕಾದರೆ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಿ ಎಂದು ಆಗ್ರಹಿಸಿದರು. ನಂತರ ಆಯುಕ್ತ ಲಕ್ಷ್ಮೀನಾರಾಯಣ ಈ ಬಗ್ಗೆ ಗಂಭೀರ ಕ್ರಮಕೈಗೊಳ್ಳುವುದಾಗಿ ಹೇಳಿದರು.