ಬೆಂಗಳೂರು: ವೈಯಕ್ತಿಕ ಪ್ರತಿಷ್ಠೆ ಬದಿಗಿಟ್ಟು, ಸಂಸ್ಥೆಯ ಪ್ರತಿಷ್ಠೆಯನ್ನು ಪರಿಗಣಿಸಿ ಲೋಕಾಯುಕ್ತ ಹುದ್ದೆಗೆ ನ್ಯಾ. ಭಾಸ್ಕರರಾವ್ ರಾಜಿನಾಮೆ ನೀಡಬೇಕು ಎಂದು ರಾಜ್ಯ ಬಿಜೆಪಿ ಒತ್ತಾಯಿಸಿದೆ. ಅದೇ ರೀತಿ ಪ್ರಕರಣವನ್ನು ಪ್ರತಿಷ್ಠೆಯeಗಿ ಸ್ವೀಕರಿಸದೇ ಸಿಬಿಐಗೆ ವಹಿಸಬೇಕೆಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮeತನಾಡಿದ ಬಿಜೆಪಿ ವಕ್ತಾರ ಸುರೇಶ್ ಕುಮಾರ್, ಲೋಕಾಯುಕ್ತರು ಮುಜುಗರ ಅನುಭವಿಸುವ ಬದಲು ರಾಜಿನಾಮೆ ಕೊಡುವುದೇ ಸೂಕ್ತ. ಅಲ್ಲದೇ ಅವರು ರಾಜಿನಾಮೆ ಕೊಡಬೇಕೆಂಬುದು ಇಡೀ ನಾಡಿನ ಎಲ್ಲಾ ಪ್ರಜ್ಞಾವಂತ ನಾಗರಿಕರ ಆಗ್ರಹ ಎಂದರು.
ಮಾದರಿಗೆ ಕಳಂಕ:
ಕರ್ನಾಟಕದ ಲೋಕಾಯುಕ್ತ ಕಾಯ್ದೆ ಇಡೀ ದೇಶಕ್ಕೆ ಒಂದು ಮಾದರಿ ಕಾಯ್ದೆ. ಆದರೆ, ಇಲ್ಲಿ ನಡೆದಿರುವ ವಿದ್ಯಮಾನಗಳು, ಸಂಶಯದ ಮುಳ್ಳು ಕೂಡ ಲೋಕಾಯುಕ್ತರ ಮನೆಯತ್ತ ಮತ್ತು ಲೋಕಾಯುಕ್ತ ಕಚೇರಿ ಕಡೆ ತೋರಿಸುತ್ತಿದೆ. ಲೋಕಾಯುಕ್ತ ಕಚೇರಿಯ ಕೃಷ್ಣರಾವ್ ಅತ್ಯಂತ ಗೂಢವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಲೋಕಾಯುಕ್ತರ ಮಗ ಅಶ್ವಿನ್ ರಾವ್ ಅವರ ಮೇಲೆ ಆರೋಪ ಬಂದಿದೆ. ವ್ಯಕ್ತಿಗಿಂತ ಸಂಸ್ಥೆ ದೊಡ್ಡದು ಎಂಬುದನ್ನು ಮನಸ್ಸಿನಲ್ಲಿಟ್ಟು ನ್ಯಾ. ಭಾಸ್ಕರ್‍ರಾವ್ ರಾಜಿನಾಮೆ ಕೊಡಬೇಕೆಂದು ಕರ್ನಾಟಕದ ವಕೀಲರ ಪರಿಷತ್ತು ಕೂಡ ನಿರ್ಣಯ ಕೈಗೊಂಡು, ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಬೇಕೆಂದು ಆಗ್ರಹಿಸಿದೆ. ಅಷ್ಟೇ ಅಲ್ಲದೇ, ಲೋಕಾಯುಕ್ತರ ಪ್ರತಿ ಕಾರ್ಯಕ್ರಮವನ್ನು ಬಹಿಷ್ಕರಿಸುತ್ತೇವೆ ಎಂದು ಹೇಳಿದೆ. ಇದು ಅತ್ಯಂತ ಮುಜುಗರ ತರುವ ಸಂದರ್ಭ ಎಂದು ಹೇಳಿದರು.
ಆಡಳಿತದಲ್ಲಿ ಭ್ರಷ್ಟಾಚಾರ ನಿಯಂತ್ರಿಸಬೇಕಾದ ಸಂಸ್ಥೆಯೇ ಭ್ರಷ್ಟಾಚಾರದ ಸುಳಿವಿನಲ್ಲಿ ಸಿಲುಕಿದೆ. ಈ ಸೂಕ್ಷ್ಮವನ್ನು ಲೋಕಾ ಯುಕ್ತ ನ್ಯಾ. ಭಾಸ್ಕರ್ ರಾವ್ ಅರಿಯಬೇಕು, ತಮ್ಮ ಸಂಸ್ಥೆಯ ಪಾವಿತ್ರ್ಯ ಕಾಪಾಡುವ ಉದ್ದೇಶದಿಂದ ಕೂಡಲೇ ರಾಜಿನಾಮೆ ಕೊಡಬೇಕು ಎಂದು ಸುರೇಶ್‍ಕುಮಾರ್ ಆಗ್ರಹಿಸಿದರು.
ಸಿಬಿಐ ತನಿಖೆಯೇ ಸೂಕ್ತ:
ಎಡಿಜಿಪಿ ಕಮಲ್ ಪಂತ್ ನೇತೃತ್ವದಲ್ಲಿ ಸರ್ಕಾರ ವಿಶೇಷ ತನಿಖಾ ತಂಡ ರಚಿಸಿದೆ. ಕಮಲ್‍ಪಂತ್ ಅವರ ದಕ್ಷತೆ ಬಗ್ಗೆ ಸಂಶಯವಿಲ್ಲ. ಆದರೆ, ಲೋಕಾಯುಕ್ತ ಪ್ರಕರಣದಲ್ಲಿ ಅನೇಕ ಮಹನೀಯರ ಹೆಸರು ತಗುಲಿಕೊಂಡಿದೆ. ನಮ್ಮ ರಾಜ್ಯದ ತನಿಖಾ ತಂಡದ ಮುಂದೆ ಬರುವ ಪ್ರಭಾವಗಳು, ಒತ್ತಡಗಳನ್ನು ಯಾರಾದರೂ ಸುಲಭವಾಗಿ ಊಹೆ ಮಾಡಬಹುದು. ಹೀಗಾಗಿ
ಸಿಬಿಐ ತನಿಖೆ ಸೂಕ್ತ ಎಂದರು.