ಬೆಂಗಳೂರು:ವೃತ್ತಿ ಶಿಕ್ಷಣ ಸೀಟುಗಳ ಹಂಚಿಕೆಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ 2ನೇ ಸುತ್ತಿನ ಕೌನ್ಸೆಲಿಂಗ್ ಪ್ರಕ್ರಿಯೆ ಜುಲೈ 4ರಿಂದ ಆರಂಭವಾಗಲಿದೆ.
ಪೂರ್ವ ನಿಗದಿತ ವೇಳಾಪಟ್ಟಿಯಂತೆ ಜುಲೈ 2ರಿಂದ ನಡೆಯಬೇಕಾಗಿತ್ತು. ವಿವಿಧ ಕಾರಣದಿಂದ ಪ್ರಾಧಿಕಾರ ಎರಡು ದಿನ ಕೌನ್ಸೆಲಿಂಗ್ ಮುಂದೂಡಿತ್ತು. ಜುಲೈ 4ರಂದು ಬೆಳಿಗ್ಗೆ 11 ಗಂಟೆ ನಂತರ ಸೀಟ್ ಮ್ಯಾಟ್ರಿಕ್ಸ್ ಅನ್ನು ಕೆಇಎ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗುತ್ತದೆ.
ಅರ್ಹ ಅಭ್ಯರ್ಥಿಗಳು ಆಪ್ಷನ್ ಎಂಟ್ರಿ ಮಾಡಲು, ಅಂದರೆ ಈಗಾಗಲೇ ಮಾಡಿರುವ ಆಪ್ಷನ್ ಗಳ ಆದ್ಯತೆಗಳಲ್ಲಿ ಬದಲಾವಣೆ ಮಾಡಲು-ಬೇಡವಾದ ಆಪ್ಷನ್ ಅನ್ನು ತೆಗೆದುಹಾಕುವುದಕ್ಕೆ ಜುಲೈ 4ರ ಮಧ್ಯಾಹ್ನ 2ರಿಂದ 8ರಂದು ಬೆಳಗ್ಗೆ 10 ಗಂಟೆಯವರೆಗೆ ಅವಕಾಶ ನೀಡಲಾಗಿದೆ.
2ನೇ ಸುತ್ತಿನ ಸೀಟು ಹಂಚಿಕೆ ಫಲಿತಾಂಶವನ್ನು ಜುಲೈ 10ರಂದು ಮಧ್ಯಾಹ್ನ 2 ಗಂಟೆ ನಂತರ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗುತ್ತದೆ. ಜುಲೈ 13ರಿಂದ 15ರವರೆಗೆ ನೀಡಲಾದ ಸೀಟಿನ ಬಗ್ಗೆ ಒಪ್ಪಿಗೆ ತಿಳಿಸಲು, ಶುಲ್ಕ ಪಾವತಿಸಲು ಮತ್ತು ಕಾಲೇಜು ದಾಖಲಾತಿಗೆ ಪ್ರವೇಶಾನುಮತಿ ಪತ್ರ ಡೌನ್ ಲೋಡ್ ಮಾಡಿಕೊಳ್ಳಲು ಮೂರು ದಿನ ಕಾಲಾವಕಾಶವಿರುತ್ತದೆ.
ಪ್ರವೇಶ ಪಡೆದ ಅಭ್ಯರ್ಥಿಗಳು ಜುಲೈ 16ರಂದು ಸಂಜೆ 5.30ರೊಳಗೆ ಕಾಲೇಜುಗಳಿಗೆ ವರದಿ ಮಾಡಿಕೊಳ್ಳಬೇಕು, ಹೆಚ್ಚಿನ ವಿವರಗಳಿಗೆ http://kea.kar.nic.in ವೆಬ್ ಸೈಟ್ ವೀಕ್ಷಿಸುವಂತೆ ಪ್ರಾಧಿಕಾರ ತಿಳಿಸಿದೆ.