ಜಿಲ್ಲಾ ಸುದ್ದಿ

ಅನ್ನಭಾಗ್ಯ ಸರ್ಕಾರದ ಭಿಕ್ಷೆಯಲ್ಲ, ಬಡವರ ಹಕ್ಕು: ಮರುಳ ಸಿದ್ದಪ್ಪ

Srinivas Rao BV

ಬೆಂಗಳೂರು: ಕೇಂದ್ರ ಸರ್ಕಾರದ ಕಾರ್ಪೊರೇಟ್ ಪರ ನಿಲುವನ್ನು ಖಂಡಿಸದ ಕೆಲವು ಸಾಹಿತಿಗಳು ರಾಜ್ಯ ಸರ್ಕಾರ ಬಡವರಿಗಾಗಿ ವೆಚ್ಚ ಮಾಡುತ್ತಿರುವ ಅನ್ನಭಾಗ್ಯ ಯೋಜನೆಯನ್ನು ಟೀಕಿಸುತ್ತಾರೆ ಎಂದು ಸಾಹಿತಿ ಡಾ.ಕೆ ಮರುಳಸಿದ್ದಪ್ಪ ಕಿಡಿಕಾರಿದ್ದಾರೆ.

ಮಾನಸಗಂಗೋತ್ರಿಯಲ್ಲಿ ಏರ್ಪಡಿಸಿದ್ದ ಬಡತನ ಮತ್ತು ಹಸಿವಿನ ಪ್ರಶ್ನೆಗಳು ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಕೇಂದ್ರ ಹಣಕಾಸು ಸಚಿವರು ಕಾರ್ಪೊರೇಟ್ ಗಳಿಗೆ ಶೇ.5  ರಿಂದ 10 ವರೆಗೆ ತೆರಿಗೆ ವಿನಾಯಿತಿ ನೀಡಿದ್ದರಿಂದ ಸರ್ಕಾರದ ಬೊಕ್ಕಸಕ್ಕೆ ರೂ.1 .75 ಲಕ್ಷ ಕೋಟಿ ಹೊರೆಯಾಗಿದೆ. ಅದೇ ಸಿದ್ದರಾಮಯ್ಯ ಸರ್ಕಾರ ಅನ್ನಭಾಗ್ಯಕ್ಕಾಗಿ ನೀಡುತ್ತಿರುವ ಹಣ ಕೇವಲ ರೂ.5 ರಿಂದ 6 ಸಾವಿರ ಕೋಟಿ. ಕೇಂದ್ರದ ಕಾರ್ಪೊರೇಟ್ ಪರ ನಿಲುವು ಟೀಕಿಸದ ಮಧ್ಯಮವರ್ಗದ ಬುದ್ದಿಜೀವಿಗಳು ಅನ್ನಭಾಗ್ಯ ಯೋಜನೆಯನ್ನು ಟೀಕಿಸುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮೀನು ನೀಡುವ ಬದಲು ಮೀನು ಹಿಡಿಯುವುದನ್ನು ಕಳಿಸಿ ಎಂದು ಸಾಣೆಹಳ್ಳಿ ಸ್ವಾಮಿಜಿ ಹೇಳುತ್ತಾರೆ. ಅವರ ಮಾತನ್ನು ಒಪ್ಪುವುದಾದರೆ ಮೊದಲು ಕೊಳದಲ್ಲಿ ಮೀನುಗಳಿರಬೇಕಲ್ಲವೇ? ಈಗಿನ ಅನೇಕ ಮಠಗಳು ದಾಸೋಹ ಏರ್ಪಡಿಸುತ್ತವೆ. ದಾಸೋಹ ಕಲ್ಪನೆ ಬಡವರಿಗಾಗಿ ಬಂದದ್ದು. ಇದರ ಮುಂದುವರೆದ ಭಾಗವೇ ಅನ್ನಭಾಗ್ಯ. ಇದು ಬಡವರಿಗೆ ನೀಡುತ್ತಿರುವ ಭಿಕ್ಷೆಯಲ್ಲ ಹಕ್ಕು. ಅನ್ನಭಾಗ್ಯದಿಂದ ಜನರು ಸೋಮಾರಿಗಳಾಗುತ್ತಾರೆ ಎನ್ನುವ ಭೈರಪ್ಪ ಮೊದಲು ತಮ್ಮ ಮನೆಯ ಮುಂದೆ ಕಸಗುಡಿಸುವುದನ್ನು ಕಲಿಯಲಿ ಎಂದರು.

ಸಾಹಿತಿ ಪ್ರೊ.ಜಿ.ಕೆ ಗೋವಿಂದರಾವ್ ಮಾತನಾಡಿ ತಮ್ಮದು ಬಡವರ ಪಕ್ಷ ಎಂದು ಹೇಳಿಕೊಳ್ಳುವವರು ಬಡವರಿಗೆ ಯೋಜನೆಗಳನ್ನು ತಂದರೆ ಟೀಕಿಸುತ್ತಾರೆ. ಯಾಕೆಂದರೆ ಬಡವರು ಬಡವರಾಗಿಯೇ ಉಳಿಯಬೇಕು ಎಂಬುದು ಅವರ ಉದ್ದೇಶ. ಹಾಗಾಗಿ ಜನರು ಬುದ್ಧಿ ಕಲಿಯಬೇಕು ಎಂದರು.

"ಜಯಲಲಿತಾ ಅವರು ಸಾವಿರಾರು ಕೋಟಿ ಹಗರಣ ಮಾಡಿ ಸಿಕ್ಕಿ ಹಾಕಿಕೊಂಡಿರಬಹುದು. ಆದರೆ ಅವರು ತಂದ ಯೋಜನೆಗಳಿಂದ ಬಡವರಿಗೆ ಅನುಕೂಲವಾಗಿದೆ. ಉಚಿತ ಅಕ್ಕಿ, ಅಮ್ಮಾ ಕ್ಯಾಂಟೀನ್, ಅಮ್ಮಾ ವಾಟರ್ ನೀಡುತ್ತಿದ್ದಾರೆ. ಇಂತಹ ಯೋಜನೆ ನೋಡಿದಾಗ ಅವರ ತಪ್ಪನ್ನು ಕ್ಷಮಿಸಬೇಕು".

-ಡಾ.ಕೆ ಮರುಳಸಿದ್ದಪ್ಪ

  

SCROLL FOR NEXT