ಬೆಂಗಳೂರು: ಕರ್ನಾಟಕದ ಸೇರಿದಂತೆ ದೇಶದ ನಾಲ್ಕು ರಾಜ್ಯಗಳಲ್ಲಿ ಉಕ್ಕಿನ ಕಾರ್ಖಾನೆ ಸ್ಥಾಪಿಸಲು ಉದ್ದೇಶಿಸಿದ್ದು, ರು 18 ಸಾವಿರ ಕೋಟಿ ಬಂಡವಾಳ ಹೂಡಲಾಗುತ್ತಿದೆ ಎಂದು ಕೇಂದ್ರ ಉಕ್ಕು ಖಾತೆ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ. ಮಂಗಳವಾರ ಉಕ್ಕು- ಸಂಸದೀಯ ಸಲಹಾ ಸಮಿತಿಯ ಸಭೆಯಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಛತ್ತೀಸ್ ಗಡ , ಒರಿಸ್ಸಾ, ಜಾರ್ಖಂಡ್ ಮತ್ತು ಕರ್ನಾಟಕದಲ್ಲಿ ಉಕ್ಕು ಕಾರ್ಖಾನೆ ಆರಂಭಿಸಬೇಕೆಂಬ ನಿರ್ಧಾರ ವಾಗಿದೆ. ಜಾರ್ಖಂಡ್ ಮತ್ತು ಚತ್ತೀಸ್ ಗಢದಲ್ಲಿ ಈಗಾಗಲೇ ಜಾಗ ಗುರುತಿಸಲಾಗಿದೆ. ಕರ್ನಾಟಕದಲ್ಲಿ ಎಲ್ಲಿ ಘಟಕ ಸ್ಥಾಪಿಸಬೇಕೆಂಬ ಬಗ್ಗೆ ತೀರ್ಮಾನ ವಾಗಿಲ್ಲ. ಈ ವಿಚಾರದಲ್ಲಿ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸುತ್ತಿರುವುದಾಗಿ ತಿಳಿಸಿದರು. ಕರ್ನಾಟಕ ಮತ್ತು ಒರಿಸ್ಸಾದಲ್ಲಿ ರಾಷ್ಟ್ರೀಯ ಉಕ್ಕು ಪ್ರಾಧಿಕಾರದ ಸಾರಥ್ಯದಲ್ಲಿ ಘಟಕಗಳನ್ನು ಸ್ಥಾಪಿಸಲಾಗುತ್ತದೆ. ಉಳಿದೆರಡು ಕಡೆ ಈಗಾಗಲೇ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಆಟೊಮೊಬೈಲ್ ಕ್ಷೇತ್ರಕ್ಕೆ ಅಗತ್ಯವಾದ ಕಬ್ಬಿಣವನ್ನು ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳಲಾಗಿದೆ. ಆಟೊಮೊಬೈಲ್ ಕ್ಷೇತ್ರಕ್ಕೆ ಅಗತ್ಯವಾದ ಕಬ್ಬಿಣವನ್ನು ನಮ್ಮ ದೇಶದಲ್ಲೇ ಸೃಷ್ಟಿಸಿಕೊಳ್ಳುವ ಉದ್ದೇಶದಿಂದ `ಸ್ಟೀಲ್ ರಿಸರ್ಚ್ ಅಂಡ್ ಟೆಕ್ನಾಲಜಿ ಮಿಷನ್ ಆಫ್ ಇಂಡಿಯಾ' ಎಂಬ ಸಂಶೋಧನಾ ಸಂಸ್ಥೆಯನ್ನು ಸ್ಥಾಪಿಸಲಾಗುತ್ತಿದ್ದು, ಕೇಂದ್ರ ಸರ್ಕಾರವು ರು. 100 ಕೋಟಿ ನೀಡುತ್ತಿದೆ. ಅದೇ ರೀತಿ ಕಾರ್ಪೋರೇಟ್ ವಲಯವೂ ಈ ಕೇಂದ್ರಕ್ಕೆ ಹಣ ನೀಡುತ್ತದೆ ಎಂದು ಅವರು ವಿವರಿಸಿದರು.
ಸಂಶೋಧನೆಗೆ ಒತ್ತು: ಭಾರತವು ಉಕ್ಕು ಉತ್ಪಾದನೆಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದು, ಕಳೆದ ವರ್ಷ ಕಚ್ಚಾ ಉಕ್ಕು ತಯಾರಿಕೆಯಲ್ಲಿ ಶೇ.8ರಷ್ಟು ವೃದ್ಧಿ ಸಾ„ಸಿದೆ. 2025ರ ವೇಳೆಗೆ ಭಾರತದಲ್ಲಿ ವಾರ್ಷಿಕ 300 ಮಿಲಿಯನ್ ಟನ್ ಉತ್ಪಾದನೆಯಾಗಬೇಕಾಗಿದ್ದು, ಈ ನಿಟ್ಟಿನಲ್ಲಿ ಇಲಾಖೆಯು ಕಾರ್ಯಯೋಜನೆ ಸಿದ್ಧಪಡಿಸುತ್ತಿದೆ ಎಂದು ತೋಮರ್ ಹೇಳಿದರು.ಉಕ್ಕು ಉತ್ಪಾದನಾ ಕ್ಷೇತ್ರದಲ್ಲಿ ಸಂಶೋಧನೆಗೆ ಕಡಿಮೆ ಒತ್ತುಕೊಡುತ್ತಿರುವುದನ್ನು ಸಭೆ ಪ್ರಸ್ತಾಪಿಸಿದೆ. ಇನ್ನು ಮುಂದೆ ಸಂಶೋಧನೆಗೆ ಹೆಚ್ಚಿನ ಆದ್ಯತೆ ಕೊಡ ಬೇಕೆಂದು ಸಲಹೆ ನೀಡಿದ್ದು, ಸಭೆಯಲ್ಲಿದ್ದ ಸದಸ್ಯರು ನನ್ನ ಮಾತಿಗೆ ಸಹಮತ ವ್ಯಕ್ತಪಡಿಸಿದರು ಎಂದು ಹೇಳಿದ ಅವರು, ದೊಡ್ಡ ಉಕ್ಕು ಕಂಪೆನಿಗಳು ತಮ್ಮ ವಾರ್ಷಿಕ ವ್ಯವಹಾರದಲ್ಲಿ ಶೇ.1ರಷ್ಟನ್ನು ಸಂಶೋಧನೆಗೆ ನೀಡಬೇಕು ಎಂದು ಸಲಹೆ ನೀಡಿದ್ದೇನೆ ಎಂದರು.
ಉಕ್ಕು ಸಚಿವಾಲಯವು ಹೊಸ ತಂತ್ರಜ್ಞಾನ ಹೊಂದಿರುವ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರ ಆರಂಭಿಸುತ್ತಿದೆ. ಇದಕ್ಕೆ ಈಗಾಗಲೇ ಅನುಮತಿ ನೀಡಲಾಗಿದ್ದು, ಭಾರತದ ಪ್ರಮುಖ ಉಕ್ಕು ಕಂಪನಿಗಳು ಈ ಕೇಂದ್ರದೊಂದಿಗೆ ಒಡಂಬಡಿಕೆ ಮಾಡಿಕೊಳ್ಳುತ್ತಿವೆ. ಇಲ್ಲಿ ನಡೆಯುವ ಉನ್ನತ ಮಟ್ಟದ ಸಂಶೋಧನೆಯಿಂದ ಭಾರತದ ಉಕ್ಕು ಕೈಗಾರಿಕಾ ಕ್ಷೇತ್ರದ ವಿಸ್ತರಣೆಗೆ ಸಹಕಾರಿಯಾಗಲಿದೆ ಎಂದು ಹೇಳಿದರು.
ಗಣಿಪ್ರದೇಶ ಪುನಶ್ಚೇತನ
ಈಗಾಗಲೇ ಗಣಿಗಾರಿಕೆ ನಡೆದಿರುವ ಪ್ರದೇಶಗಳ ಪುನಶ್ಚೇತನಕ್ಕೆ ನಿಧಿಯನ್ನು ಬಳಸುವ ಬಗ್ಗೆ ಮಾರ್ಗಸೂಚಿ ಸಿದ್ಧವಾಗಿದೆ. ಗಣಿ ಪ್ರದೇಶದಿಂದ ಸಂಕಷ್ಟಕ್ಕೀಡಾದ ಪ್ರದೇಶ ಮತ್ತು ವ್ಯಕ್ತಿಗಳನ್ನು ಇದೇ ಪ್ರಥಮ ಬಾರಿಗೆ ಕೇಂದ್ರೀಕರಿಸಲಾ ಗಿದೆ. ರಾಜ್ಯ ಸರ್ಕಾರದ ಸಹಯೋಗದಲ್ಲಿ ಈ ಸಂಬಂಧ ಯೋಜನೆ ರೂಪಿಸಲಾಗುತ್ತದೆ ಎಂದರು. ವಿಐಎಸ್‍ಎಲ್ ಮತ್ತು ಕುದುರೆಮುಖ ಘಟಕಗಳ ಕುರಿತಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ತೋಮರ್, ಮುಖ್ಯಮಂತ್ರಿಗಳೊಂದಿಗೆ ಈ ವಿಚಾರದಲ್ಲಿ ಚರ್ಚಿಸಿದ್ದು ರಾಜ್ಯ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳುವ ವಿಶ್ವಾಸವಿದೆ ಎಂದು ಹೇಳಿದರು.