ಬೆಂಗಳೂರು: ಬಿಬಿಎಂಪಿಯನ್ನು 5 ಪಾಲಿಕೆಗಳಾಗಿ ಪುನಾರಚನೆ ಮಾಡಬೇಕೆಂದು ಮಾಜಿ ಮೇಯರ್ ಗಳ ಅಧ್ಯಯನ ಸಮಿತಿ ಶಿಫಾರಸು ಮಾಡಿದೆ.
ಮಾಜಿ ಸಚಿವ ಬಿಎಲ್ ಶಂಕರ್ ನೇತೃತ್ವದಲ್ಲಿ ಕಾಂಗ್ರೆಸ್ ರಚಿಸಿದ್ದ ಮಾಜಿ ಮೇಯರ್ ಗಳ ಸಮಿತಿ ಗುರುವಾರ ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ್ ಗೆ ಅಧ್ಯಯನ ವರದಿಯನ್ನು ಸಲ್ಲಿಸಿದೆ.
ಈ ವರದಿಯಲ್ಲಿ ಬಿಬಿಎಂಪಿಯನ್ನು ಮೂರು ರೀತಿಯ ಸುಧಾರಣೆ ಮಾಡಬಹುದು ಎಂದು ಶಿಫಾರಸುಗಳನ್ನು ಮಾಡಲಾಗಿದ್ದು, ಐದು ಪಾಲಿಕೆಗಳನ್ನುಪುನಾರಚಿಸಬೇಕೆನ್ನುವುದನ್ನೇ ಒತ್ತಿ ಹೇಳಲಾಗಿದೆ. ಸಮಿತಿ ಸದಸ್ಯರಾದ ಮಾಜಿ ಮೇಯರ್ ಗಳಾದ ಪಿ.ಆರ್ ರಮೇಶ್, ರಾಮಚಂದ್ರಪ್ಪ, ವಿಜಯ್ ಕುಮಾರ್, ಮುಮತಾಜ್ ಬೇಗಂ, ನಾರಾಯಣ ಸ್ವಾಮೀ ಸೇರಿದಂತೆ 9 ಮಂದಿ ಮತ್ತು ಸಲಹೆಗಾರರು ಈ ತನಕ ನಾಲ್ಕು ಸಭೆ ನಡೆಸಿದ್ದರು. ಈ ಸಂದರ್ಭದಲ್ಲಿ ಬಿಬಿಎಂಪಿ ಆಡಳಿತ ಸುಧಾರಣೆ ಮಾಡುವುದು. ಆ ನಿಟ್ಟಿನಲ್ಲಿ ಆಗಬೇಕಿರುವ ಬದಲಾವಣೆಗಳನ್ನು ಚರ್ಚಿಸಲಾಗಿತ್ತು. ಅಲ್ಲದೇ ನಗರದಲ್ಲಿ ಪಾಲಿಕೆಯಿಂದ ಉತ್ತಮ ಆಡಳಿತ ನೀಡಲು ವಿಭಜನೆ ಪರಿಹಾರವೇ ಅಥವಾ ಇರುವ ವ್ಯವಸ್ಥೆಉಅನ್ನು ಬದಲಾಯಿಸಿ ಸುಧಾರಿಸುವುದು ಸೂಕ್ತವೆ ಎನ್ನುವ ಬಗ್ಗೆಯೂ ಚರ್ಚಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಅಧ್ಯಯನ ವರದಿ ಸಿದ್ಧಪಡಿಸಿರುವ ಸಮಿತಿ ಪಾಲಿಕೆಯನ್ನು ಇರುವಂತೆಯೇ ಉಳಿಸಿಕೊಳ್ಳಬೇಕಾದರೆ 8 ವಲಯಗಳನ್ನು ಸಮಗ್ರವಾಗಿ ಬದಲಿಸಿ ಬಲಪಡಿಸಬೇಕೆಂದು ಹೇಳಿದೆ.
ಇದು ಬೇಡವಾದರೆ ಬಿಬಿಎಂಪಿಯನ್ನು ಮೂರು ಪಾಲಿಕೆಗಳನ್ನಾಗಿ ವಿಭಜಿಸಿ ಆಡಳಿತವನ್ನು ಪ್ರತ್ಯೇಕಗೊಳಿಸಬೇಕೆಂದಿದ್ದರೂ ಐದು ಪಾಲಿಕೆಗಳ ರಚನೆಯನ್ನು ಒತ್ತಿ ಹೇಳಿರುವ ಸಮಿತಿ, ಐವರು ಮೇಯರ್ ಉಪಮೇಯರ್ ಅಗತ್ಯತೆಯನ್ನು ತಿಳಿಸಿದೆ. ಮೇಯರ್ ಅವಧಿ ಎಷ್ಟಿರಬೇಕೆನ್ನುವುದನ್ನು ಸರ್ಕಾರದ ವಿವೇಚನೆಗೆ ಬಿಡಲಾಗಿದೆ.