ಬೆಂಗಳೂರು: ಬೆಂಗಳೂರು ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ನ (ಐಐಎಂ-ಬಿ) ಸಹಾಯಕ ಪ್ರಾಧ್ಯಾಪಕರಾಗಿದ್ದ ಎಂ.ಸಿದ್ದಪ್ಪ ನಿರ್ದೋಷಿ ಎಂಬ ಏಕಸದಸ್ಯ ಪೀಠದ ಆದೇಶವನ್ನು ಹೈಕೋರ್ಟ್ ವಿಭಾಗೀಯ ಪೀಠವೂ ಎತ್ತಿ ಹಿಡಿದಿದೆ.
ಈ ಸಂಬಂಧ ಐಐಎಂ-ಬಿ ಆಡಳಿತ ಮಂಡಳಿ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಎನ್.ಕೆ. ಪಾಟೀಲ್ ಹಾಗೂ ನ್ಯಾಯಮೂರ್ತಿ ರತ್ನಕಲಾ ಅವರಿದ್ದ ವಿಭಾಗೀಯ ಪೀಠ ಇತ್ಯರ್ಥಪಡಿಸಿದೆ. ಸಿದ್ದಪ್ಪನವರು ಅಮಾನತುಗೊಂಡ ದಿನದಿಂದ ನಿವೃತ್ತಿ ಆಗುವವರೆಗಿನ 9 ವರ್ಷಗಳ ಉಳಿಕೆ ಸೇವಾವಧಿಯ ಎಲ್ಲ ವೇತನ ಹಾಗೂ ಇತರೆ ಆರ್ಥಿಕ ಸೌಲಭ್ಯಗಳನ್ನು ಸಂಸ್ಥೆಯು ಮುಂದಿನ 60 ದಿನಗಳಲ್ಲಿ ನೀಡಬೇಕು ಎಂದು ವಿಭಾಗೀಯ ಪೀಠ ಆದೇಶಿಸಿದೆ.
ಮೂಲತಃ ದಾವಣಗೆರೆ ತಾಲೂಕಿನ ಮಾಯಕೊಂಡ ಹೋಬಳಿಯ ಅಣಬೇರು ಗ್ರಾಮದವರಾದ ಸಿದ್ದಪ್ಪನವರು, 1974ರಲ್ಲಿ ಬೆಂಗಳೂರು ಐಐಎಂಗೆ ಸೇರ್ಪಡೆಯಾಗುವ ಮುನ್ನ ಆಹಮದಾಬಾದ್ ಐಐಎಂನಲ್ಲಿ ಒಂದು ವರ್ಷ ಮತ್ತು ಮುಂಬೈ ಐಐಎಂನಲ್ಲಿ ಮೂರು ವರ್ಷ ಹಣಕಾಸು ವಿಭಾಗದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು.
1986ರ ಜುಲೈ ತಿಂಗಳಿನಲ್ಲಿ ಐಐಎಂ-ಬಿ ಕ್ಯಾಂಪಸ್‍ನಲ್ಲಿ ಸಂಸ್ಥೆಯ ನೌಕರರ ಸಂಘದ ಕೆಲವರು ಮತ್ತು ಸಿದ್ದಪ್ಪನವರ ಮಧ್ಯೆ ಅಹಿತಕರ ಘಟನೆಯೊಂದು ನಡೆದಿತ್ತು. ಈ ಸಂಬಂಧ ಸಂಸ್ಥೆಯ ಆಂತರಿಕ ಸಮಿತಿ ತನಿಖೆ ನಡೆಸಿ ಸಿದ್ದಪ್ಪ ಮತ್ತು ಇತರೆ ಎಲ್ಲ ಆರೋಪಿಗಳನ್ನು ತಪ್ಪಿತಸ್ಥರು ಎಂದು ಗುರುತಿಸಲಾಗಿತ್ತು. ಹೀಗಾಗಿ 1986ರಲ್ಲಿ ಸಿದ್ದಪ್ಪ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿತ್ತು.
ಸಂಸ್ಥೆಯ ಅಮಾನತು ಆದೇಶ ಕಾನೂನುಬಾಹಿರ ಎಂದು ಪ್ರೊ.ಸಿದ್ದಪ್ಪ 1993ರಲ್ಲಿ ಹೈಕೋರ್ಟ್‍ನಲ್ಲಿ ಅರ್ಜಿ ದಾಖಲಿಸಿದ್ದರು. ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠ 2006ರಲ್ಲಿ ಸಿದ್ದಪ್ಪನವರು ನಿರ್ದೋಷಿ ಎಂದು ಆದೇಶಿಸಿ ಅವರಿಗೆ ಸೇರಬೇಕಾದ ಬಾಕಿ ಹಣ ಹಾಗೂ ಇತರೆ ಆರ್ಥಿಕ ಸೌಲಭ್ಯಗಳನ್ನು ನೀಡುವಂತೆ ಆದೇಶಿಸಿತ್ತು. ಏಕಸದಸ್ಯ ಪೀಠದ ಈ ಆದೇಶ ಪ್ರಶ್ನಿಸಿ ಆಡಳಿತ ಮಂಡಳಿ 2006ರಲ್ಲಿ ವಿಭಾಗೀಯ ಪೀಠದಲ್ಲಿ ರಿಟ್ ಮೇಲ್ಮನವಿ ಸಲ್ಲಿಸಿತ್ತು.