ಬೆಂಗಳೂರು: ಲೋಕಾಯುಕ್ತ ಭ್ರಷ್ಟಾಚಾರ ಪ್ರಕರಣದಲ್ಲಿ ನೀವೂ ಪಾಲುದಾರರು ಎಂದು ಸರ್ಕಾರದ ವಿರುದ್ಧ ನೇರ ಆರೋಪ ಮಾಡಿರುವ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ ಕುಮಾರಸ್ವಾಮಿ ಲೋಕಾಯುಕ್ತದಲ್ಲಿನ 2013 ರಿಂದ ಇಲ್ಲಿವರೆಗಿನ ಸಿಸಿಟಿವಿ ದೃಶ್ಯಾವಳಿಗಳನ್ನು ಸರ್ಕಾರವೇ ಸರ್ವನಾಶ ಮಾಡಿದೆ ಎಂದು ದೂರಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರ ವಿರುದ್ಧದ ಲೋಕಲಯುಕ್ತದಲ್ಲಿ ದಾಖಲಾಗಿರುವ ಡಿನೋಟಿಫಿಕೇಶನ್ ಪ್ರಕರಣ, ಹಿರಿಯೂರಿನಲ್ಲಿ ಲೋಕಾಯುಕ್ತ ಎಸ್.ಪಿ ವಶಪಡಿಸಿಕೊಂಡ ರೂ 35 ಲಕ್ಷ ಬೇನಾಮಿ ಹಣ ಹಾಗೂ ಕೆ.ಪಿ.ಎಸ್.ಸಿ ಪ್ರಕರಣದ ಜತೆಗೆ ಲೋಕಾ ಪ್ರಕರಣ ತಳುಕು ಹಾಕಿದ ಅವರು ಸರ್ಕಾರದ ದ್ವಿಮುಖ ನೀತಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.
ಹಗರಣ ಮುಕ್ತ ಭ್ರಷ್ಟಾಚಾರ ಮುಕ್ತ ಆಡಳಿತ ನಿಡುವ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಲೋಕಾಯುಕ್ತದಲ್ಲಿ ತಮ್ಮ ವಿರುದ್ಧ ದಾಖಲಾದ ಪ್ರಕರಣದಿಂದ ಪಾರಾಗುವುದಕ್ಕೆ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಮೇ ತಿಂಗಳಲ್ಲಿ ಧಾರವಾಡದಿಂದ ಬೆಂಗಳೂರಿಗೆ ಬರುತ್ತಿದ್ದ ಸರ್ಕಾರಿ ವಾಹನವನ್ನು ಹಿರಿಯೂರು ಬಳಿ ಚಿತ್ರದುರ್ಗ ಲೋಕಾಯುಕ್ತ ಎಸ್.ಪಿ ವಶಪಡಿಸಿಕೊಂಡರು. ಅದರಲ್ಲಿದ್ದ 36.86 ಲಕ್ಷ ಬೇನಾಮಿ ಹಣ ವಶಪಡಿಸಿಕೊಂಡರು. ಆದರೆ ಸರ್ಕಾರ ಈ ಬಗ್ಗೆ ಸೂಕ್ತ ತನಿಖೆ ನಡೆಸುವ ಬದಲು ಹಣ ವಶಪಡಿಸಿಕೊಂಡ ಅಧಿಕಾರಿಯನ್ನೇ ವರ್ಗಾವಣೆಗೊಳಿಸಿತು. ಈ ಹಣ ಸರ್ಕಾರದ ಒಬ್ಬ ಮಂತ್ರಿಗೆ ಹೋಗುತ್ತಿತ್ತು ಎಂದು ಹೆಚ್.ಡಿ.ಕೆ ಆಪಾದಿಸಿದರು.
ಇದಕ್ಕೆ ಕಾನೂನು ಸಚಿವ ಟಿ.ಬಿ ಜಯಚಂದ್ರ ಹಾಗೂ ವೈದ್ಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಆಕ್ಷೇಪ ವ್ಯಕ್ತಪಡಿಸಿದರು. ಭ್ರಷ್ಟಾಚಾರ ಆರೋಪ ಮಾಡುವಾಗ ಸೂಕ್ತ ದಾಖಲೆಗಳಿರಬೇಕು ಮಂತ್ರಿಗೆ ಎಂದರೆ ಹೇಳಿದರೆ ಹೇಗೆ? ನಾವೆಲ್ಲರೂ ಮಂತ್ರಿಗಳೇ ಅಲ್ಲವೇ? ನಿಮ್ಮಲ್ಲಿ ದಾಖಲೆ ಇದ್ದಾರೆ ಆರೋಪ ಮಾಡಿ ಎಂದು ಆಕ್ರೋಶ ವ್ಯಜ್ತಪಡಿಸಿದರು.
ನಾನು ಹೆಸರು ಹೇಳುವುದಾದರೆ ನೀವು ಏನು ಕೆಲಸ ಮಾಡುತ್ತೀರಿ? ಲೋಕಾಯುಕ್ತದಲ್ಲಿ ಇರುವವರು ನಿಮ್ಮ ಅಧಿಕಾರಿಗಳೇ, ತನಿಖೆ ಮಾಡಬಹುದಾಗಿತ್ತು. ತಿರುಪತಿಗೆ ಹೋಗಲು ಲೋಕಾಯುಕ್ತರು ರೂ. 60 ಲಕ್ಷ ಹಣ ಕಳಿಸಿದ್ದಾರೆಂಬ ಆರೋಪವಿರುವಾಗ ಸದನದಲ್ಲಿ ರಾಜ್ಯಪಾಲರ ಮೂಲಕ ಭ್ರಷ್ಟಾಚಾರ ಹಗರಣ ಮುಕ್ತ ಆಡಳಿತ ನೀಡುತ್ತೇನೆ ಎಂದವರು ಸುಮ್ಮನಿರುವುದೇಕೆ ಎಂದು ಪ್ರಶ್ನಿಸಿದರು.