ಬೆಂಗಳೂರು: ಲಾರಿಗಳಿಗೆ ಮರಳು ಲೋಡ್ ಮಾಡುವ ವ್ಯಕ್ತಿಯೊಬ್ಬನ ಕೈ-ಕಾಲು ಕಟ್ಟಿ ಹಾಕಿದ ದುಷ್ಕರ್ಮಿಗಳು ವೈರ್ ನಿಂದ ಕಟ್ಟು ಬಿಗಿದು ಕೊಲೆ ಮಾಡಿರುವ ಘಟನೆ ವಿದ್ಯಾರಣ್ಯ ಪುರ ಸಮೀಪದ ದೇಶಬಂಧು ನಗರದಲ್ಲಿ ನಡೆದಿದೆ.
ರಾಜಗೋಪಾಲ ನಗರ ಸಮೀಪದ ಗಣಪತಿ ನಗರ ನಿವಾಸಿ ಅಶೋಕ್(35 ) ಕೊಲೆಯಾದವರು. ಕಳೆದ ಕೆಲ ವರ್ಷಗಳಿಂದ ಪತ್ನಿ ಹಾಗೂ ಮಕ್ಕಳೊಂದಿಗೆ ಅಶೋಕ್ ಅವರು ಗಣಪತಿ ನಗರದ ಬಾಡಿಕೆ ಮನೆಯಲ್ಲಿ ವಾಸವಿದ್ದರು. ಸಮೀಪದ ಪ್ರದೇಶಗಳಲ್ಲಿ ಲಾರಿಗಳಿಂದ ಮರಳು ಲೋಡ್, ಅನ್ ಲೋಡ್ ಹಾಗೂ ಬೇರೆ ಕಡೆಯಿಂದ ಕೂಲಿ ಕೆಲಸ ಬಂದರೂ ಮಾಡುತ್ತಿದ್ದರು. ಇವರ ಪತ್ನಿ ರಾಜಗೋಪಾಲ ನಗರದ ಕಾರ್ಖಾನೆಯೊಂದರ ಸಣ್ಣ ಹೊಟೇಲ್ ನಡೆಸುತ್ತಿದ್ದರು.
ಜುಲೈ 15 ರಂದು ಸರವಣ ಹೆಸರಿನ ವ್ಯಕ್ತಿಯೊಬ್ಬ ಬಂದು ಮರಳು ಲೋಡಿಂಗ್ ಕೆಲಸವಿದೆ ಎಂದು ಹೇಳಿ ಅಶೋಕ್ ರನ್ನು ಕರೆದುಕೊಂಡು ಹೋಗಿದ್ದ. ಕೆಲಸದ ಮೇಲೆ ಹೋಗಿ ಬರುತ್ತಿರುವುದಾಗಿ ಹೇಳಿದ್ದ ಅಶೋಕ್ ಮನೆಗೆ ವಾಪಸ್ ಆಗಿರಲಿಲ್ಲ. ಈ ಕುರಿತು ಪತ್ನಿ ರಾಜಗೋಪಾಲ ನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.
ವಿದ್ಯಾರಣ್ಯಪುರ ಸಮೀಪದ ದೇಶಬಂಧು ನಗರ ದೇವಪ್ಪ ಬಡಾವಣೆಯ ಮನೆಯೊಂದರಲ್ಲಿ ಅಸಹನೀಯ ವಾಸನೆ ಬರುತ್ತಿದ್ದ ಕಾರಣ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಸ್ಥಳಕ್ಕೆ ತೆರಳಿ ಬಾಗಿಲು ತೆರೆದು ನೋಡಿದಾಗ ಕೈ-ಕಾಲು ಕಟ್ಟಿ ಹಾಕಿದ್ದ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಗುರುತುಪತ್ತೆಗಾಗಿ ನಗರದ ಪೊಲೀಸ್ ಠಾಣೆಗಳಿಗೆ ಫೊಟೊ ರವಾನಿಸಿದಾಗ ರಾಜಗೋಪಾಲನಗರ ಠಾಣೆಯಿಂದ ನಾಪತ್ತೆಯಾದ ಅಶೋಕರ ಫೋಟೊಗೆ ಹೋಲಿಕೆ ಕಂಡುಬಂದಿದೆ. ಕುಟುಂಬ ಸದಸ್ಯರು ಶವ ಗುರುತು ಹಿಡಿದಿದ್ದಾರೆ.
ಅಶೋಕ ನ್ನು ಕರೆದುಕೊಂಡು ಹೋದ ವ್ಯಕ್ತಿ ಸುಂದರಂ ಎಂಬ ಹೆಸರಿನಲ್ಲಿ ಜೂ.27 ಎಂದು ಮನೆ ಬಾಡಿಗೆ ಪಡೆದಿದ್ದ. ಆದರೆ ಕಳೆದ 2 ದಿನಗಳಿಂದ ಕಾಣುತ್ತಿಲ್ಲ ಎಂದು ಮನೆ ಮಾಲೀಕರು ಪೊಲೀಸರಿಗೆ ತಿಳಿಸಿದ್ದಾರೆ. ಅಶೋಕ್ ನನ್ನು ಕರೆದುಕೊಂಡು ಹೋದ ವ್ಯಕ್ತಿ ಹಾಗೂ ಸುಂದರಂ ಎಂಬ ಎರಡು ಹೆಸರಿನ ವ್ಯಕ್ತಿ ಒಬ್ಬನೇ ಆಗಿದ್ದಾನಾ ಅಥವಾ ಬೇರೆ ಬೇರೆಯಾಗಿದ್ದಾರಾ ಎನ್ನುವುದು ತಿಳಿದುಬಂದಿಲ್ಲ.