ಬೆಂಗಳೂರು: ಬಿಬಿಎಂಪಿ ಚುನಾವಣೆಗೆ ವೇಳಾಪಟ್ಟಿ ಪ್ರಕಟವಾಗಿ 4 ದಿನ ಕಳೆದರೂ ಹಲವು ಅನುಮಾನ ಹಾಗೂ ಗೊಂದಲಗಳು ಮುಂದುವರಿದಿರುವುದರಿಂದ ಚುನಾವಣೆ ನಡೆಯುವ ಯಾವುದೇ ಸ್ಪಷ್ಟ ಸೂಚನೆಗಳು ಗೋಚರಿಸುತ್ತಿಲ್ಲ.
ಈ ಮಧ್ಯೆ ವಿಧಾನಪರಿಷತ್ ಪರಿಶೀಲನಾ ಸಮಿತಿ ಬಿಬಿಎಂಪಿ ವಿಭಜನೆ ಕುರಿತ ವರದಿಯನ್ನು ಇಂದು ಮಂಡಿಸಲಿದ್ದು ಇದನ್ನು ಲೆಕ್ಕಿಸದೇ ಸರ್ಕಾರ ಬಿಬಿಎಂಪಿ ವಿಭಜಿಸುವ ವಿಧೇಯಕ ಪಾಸು ಮಾಡಿಕೊಳ್ಳುವುದೇ ಎನ್ನುವ ಕುತೂಹಲ ಮೂಡಿಸಿದೆ. ಇದರೊಂದಿಗೆ ಬಿಬಿಎಂಪಿ ಚುನಾವಣೆ ಇನ್ನಷ್ಟು ಗೊಂದಲಕ್ಕೆ ತಿರುಗುತ್ತಿದೆ.
ನಿರೀಕ್ಷೆಯಂತೆ ಪರಿಶೀಲನಾ ಸಮಿತಿ ಬಿಬಿಎಂಪಿ ವಿಭಜನೆ ಬೇಡವೆಂದು ವರದಿ ನೀಡುವ ಸಾಧ್ಯತೆ ಹೆಚ್ಚಿದ್ದು ಇದರಿಂದಾಗಿ ಸದನದಲ್ಲಿ ವಿಭಜನೆ ವಿಧೇಯಕ ಸೋಲು ಕಾಣಲಿದೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ಯಾವ ನಡೆ ಅನುಸರಿಸುತ್ತದೆ ಎನ್ನುವುದು ಗುಪ್ತವಾಗಿದೆ.
ಬಿಬಿಎಂಪಿ ಚುನಾವಣೆ ಮುಂದೂಡುವ ತನ್ನ ಪ್ರಯನ್ತವನ್ನು ಸರ್ಕಾರ ಮುಂದುವರೆಸಿದ್ದು ಈಗಾಗಲೇ ಸಲ್ಲಿಕೆಯಾಗಿರುವ ಚುನಾವಣಾ ಮುಂದೂಡಿಕೆ ಸಂಬಂಧದ ಅರ್ಜಿ ವಿಚಾರಣೆಗೆ ಬರಲಿದೆ. ಚುನಾವಣೆ ಮುಂದೂಡಿಕೆ 8 ವಾರ ಕಾಲಾವಕಾಶ ನೀಡಿದ್ದ ಸುಪ್ರೀಂ ಕೋರ್ಟ್ ಈ ಹಿಂದೆ ತೀರ್ಪು ನೀಡಿತ್ತು. ಇದಕ್ಕೆ ಸಂಬಂಧಿಸಿದಂತೆ ಸ್ಪಷ್ಟೀಕರಣ ಬಯಸಿರುವ ಸರ್ಕಾರ ಯಾವ ದಿನದಿಂದ 8 ವಾರಗಳ ಅವಕಾಶ ನೀಡಲಾಗಿದೆ ಎಂದು ಕೇಳಿದೆ. ಈ ವಿಚಾರ ಸುಪ್ರೀಂ ನಲ್ಲಿ ವಿಚಾರಣೆಗೆ ಬಂದಿದ್ದರೂ ಸರ್ಕಾರಕ್ಕೆ ಇನ್ನೂ ಸ್ಪಷ್ಟೀಕರಣ ದೊರೆತಿಲ್ಲ.
3 ತಿಂಗಳ ಹಿಂದೆ ಸರ್ಕಾರ ಬಿಬಿಎಂಪಿ ವಿಭಜನೆ ವಿಧೇಯಕವನ್ನು ಪರಿಷತ್ ನಲ್ಲಿ ಮಂಡಿಸಿದಾಗ ಅದಕ್ಕೆ ಪ್ರತಿಪಕ್ಷಗಳು ಸಹಮತ ನೀಡದ ಕಾರಣ ಆಯ್ಕೆ ಸಮಿತಿ ರಚನೆಯಾಗಿತ್ತು. ಸಮಿತಿ ಸಲ್ಲಿಸಿದ ವರದಿಯಲ್ಲಿ ಪ್ರತಿಪಕ್ಷದ 7 ಸದಸಯ್ರು ಬಿಬಿಎಂಪಿ ವಿಭಜನೆ ವಿರೋಧಿಸಿ ಟಿಪ್ಪಣಿ ಸಲ್ಲಿಸಿದ್ದಾರೆ. ಸಮಿತಿಯಲ್ಲಿ ವಿಭಜನೆ ಬೇಡ ಎನ್ನುವ ಸದಸ್ಯರೇ ಹೆಚ್ಚಿರುವ ಕಾರಣ ವಿಧೇಯಕಕ್ಕೆ ಸದನದಲ್ಲಿ ಅನುಮೋದನೆ ಸಿಗುವ ಸಾಧ್ಯತೆ ಇಲ್ಲವೇ ಇಲ್ಲ ಎಂದು ಹೇಳಲಾಗಿದೆ.