ದೊಡ್ಡಬಳ್ಳಾಪುರ: ರೈತರ ಆತ್ಮಹತ್ಯೆ ವಿಚಾರ ವನ್ನು ವಿರೋಧ ಪಕ್ಷಗಳು ರಾಜ ಕೀಯಕ್ಕೆ ಬಳಸಿಕೊಳ್ಳುತ್ತಿರುವುದು ವಿಷಾದನೀಯ. ಆತ್ಮಹತ್ಯೆಗಳಿಗೆ ಸರ್ಕಾರ ಕಾರಣ ಎಂದು ದೋಷಾರೋಪ ಮಾಡುತ್ತಾ ಕಾಲಹರಣ ಮಾಡಲು ಇದು ಸಮಯವಲ್ಲ. ಬದಲಿಗೆ ಈ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಲು ಸರ್ಕಾರಕ್ಕೆ ಅಗತ್ಯ ಸಲಹೆ ನೀಡುವ ಹೊಣೆಗಾರಿಕೆ ಪ್ರದರ್ಶಿಸ ಬೇಕಿದೆ ಎಂದು ಕೇಂದ್ರದ ಮಾಜಿ ಸಚಿವ, ಸಂಸದ ಎಂ.ವೀರಪ್ಪಮೊಯ್ಲಿ ಹೇಳಿದ್ದಾರೆ.
ತಾಲೂಕಿನ ಗಂಡ ರಾಜಪುರದಲ್ಲಿ ರೈತ ವೀರಣ್ಣ(53) ಸಾಲಬಾಧೆಯಿಂದ ವಿಷ ಸೇವಿಸಿ ಮೃತಪಟ್ಟ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಭೇಟಿ ನೀಡಿ, ಮೃತ ರೈತನ ಅಂತಿಮ ದರ್ಶನ ಪಡೆದ ಮೊಯ್ಲಿ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಈಗಾಗಲೇ ಸಹಕಾರಿ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಿಗೆ ನೋಟಿಸ್ ನೀಡಲಾಗಿದ್ದು, ರೈತರಿಗೆ ಯಾವುದೇ ರೀತಿಯ ಸಾಲ ಮರು ಪಾವತಿ ನೋಟಿಸ್‍ಗಳನ್ನು ಕಳುಹಿಸದಂತೆ, ಆಸ್ತಿ ಮುಟ್ಟುಗೋಲು ಹಾಕಿಕೊಳ್ಳದಂತೆ ಸೂಚನೆ ನೀಡಲಾಗಿದೆ ಎಂದರು.