ಜಿಲ್ಲಾ ಸುದ್ದಿ

ರಾಷ್ಟ್ರಪತಿ ಅಂಗಳಕ್ಕೆ ಬಿಬಿಎಂಪಿ ವಿಭಜನೆ ವಿಧೇಯಕ ರವಾನೆ

Srinivasamurthy VN

ಬೆಂಗಳೂರು: ಮಹತ್ವದ ಬೆಳವಣಿಗೆಯೊಂದರಲ್ಲಿ ರಾಜ್ಯಪಾಲ ವಿ.ಆರ್. ವಾಲಾ ಅವರು ಬಿಬಿಎಂಪಿ ತ್ರಿವಿಭಜನೆ ವಿಧೇಯಕವನ್ನು ರಾಷ್ಟ್ರಪತಿಗಳ ಅನುಮೋದನೆಗಾಗಿ ಕಳುಹಿಸಿಕೊಟ್ಟಿದ್ದಾರೆ.

ಬಿಬಿಎಂಪಿ ತ್ರಿವಿಭಜನೆ ವಿಧೇಯಕಕ್ಕೆ ಕಾನೂನು ಚೌಕಟ್ಟಿನಲ್ಲಿ ಅನುಮೋದನೆ ನೀಡುವುದಕ್ಕೆ ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿರುವ ರಾಜ್ಯಪಾಲರು ಅದನ್ನು ರಾಷ್ಟ್ರಪತಿ ಕಚೇರಿಗೆ   ಕಳುಹಿಸಿಕೊಡುವ ಮೂಲಕ ಸರ್ಕಾರ ಮತ್ತು ರಾಜಭವನದ ಮಧ್ಯ ಏರ್ಪಟ್ಟಿದ್ದ ಸಂಘರ್ಷವನ್ನು ರಾಷ್ಟ್ರಪತಿ ಭವನಕ್ಕೆ ವರ್ಗಾಯಿಸಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರಕ್ಕೆ ಸದ್ಯದ ಸ್ಥಿತಿಯಲ್ಲಿ   ಚುನಾವಣೆ ಎದುರಿಸುವುದು ಅನಿವಾರ್ಯವಾಗಿದೆ.

ಸಾಂವಿಧಾನಿಕ ಸಂಸ್ಥೆಗಳಿಗೆ ಪ್ರತ್ಯೇಕ ಕಾಯ್ದೆ ರಚನೆ ಮಾಡುವ ಸಂದರ್ಭದಲ್ಲಿ ಸೂಕ್ತ ನಿಯಮಗಳನ್ನು ಪಾಲನೆ ಮಾಡಿಲ್ಲ ಎಂಬ ಕಾರಣ ನೀಡಿರುವ ರಾಜ್ಯಪಾಲರು ಸಂವಿಧಾನದ  243/ಎ  ಪ್ರಕಾರ ಈ ತಿದ್ದುಪಡಿ ವಿಧೇಯಕಕ್ಕೆ ಅಂಗೀಕಾರ ನೀಡುವ ಅಧಿಕಾರ ರಾಷ್ಟ್ರಪತಿಗಳಿಗೆ ಮಾತ್ರವಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ವಿಧಾನ ಮಂಡಲದ ಉಭಯ ಸದನಗಳಲ್ಲಿ ಅಂಗೀಕರಿಸಲ್ಪಟ್ಟ  ವಿಧೇಯಕವನ್ನು ರಾಷ್ಟ್ರಪತಿಗಳ ಅವಗಾಹನೆಗೆ ಕಳುಹಿಸಿದ್ದಾರೆ ಎಂದು ಗೊತ್ತಾಗಿದೆ.

ನಿರಾಕರಣೆಗೆ ಕಾರಣಗಳೇನು?
ರಾಜ ಭವನದ ಮೂಲಗಳ ಪ್ರಕಾರ ರಾಜ್ಯಪಾಲರು ಈ ವಿಧೇಯಕಕ್ಕೆ ಅಂಕಿತ ಹಾಕದೇ ಇರುವುದಕ್ಕೆ ಮೂರ್ನಾಲ್ಕು ಕಾರಣಗಳನ್ನು ನೀಡಿದ್ದಾರೆ. ಮೊದಲನೆಯದಾಗಿ, ಸಂವಿಧಾನದ ಪ್ರಕಾರ  ರಚನೆಯಾದಂಥ ಬೃಹತ್ ನಗರ ಮತ್ತು ಪಟ್ಟಣಗಳ ಸ್ಥಳೀಯ ಸಂಸ್ಥೆಗಳಲ್ಲಿ ಚುನಾಯಿತ ಸರ್ಕಾರವಿಲ್ಲದೇ ದೀರ್ಘ ಸಮಯ ಶೂನ್ಯ ಆವರಿಸಬಾರದು. ಬಿಬಿಎಂಪಿ ತ್ರಿವಿಭಜನೆ ವಿಧೇಯಕದಿಂದ  ಇಂಥದೊಂದು ಸನ್ನಿವೇಶ ಸೃಷ್ಟಿಯಾಗುವ ಸಾಧ್ಯತೆ ಇದೆ. ಎರಡನೆಯದಾಗಿ, ಬೃಹತ್ ನಗರ ಪಟ್ಟಣಗಳ ಘೋಷಣೆಗೆ ಈ ವಿಧೇಯಕದಲ್ಲಿ ಸರ್ಕಾರ ಅನುಸರಿಸಿದ ಮಾನದಂಡ  ಸಮರ್ಪಕವಾಗಿಲ್ಲ.

ಹಾಲಿ ಮತ್ತು ಹೊಸ ಪ್ರದೇಶದ ವ್ಯಾಪ್ತಿ, ಅಧಿಕಾರ ನಿಗದಿ ಮಾಡುವಾಗ ನಿರ್ದಿಷ್ಟತೆ ಇರಬೇಕು. ಆದರೆ ವಿಧೇಯಕದಲ್ಲಿ ಸರ್ಕಾರ ಇದಕ್ಕೆ ನೀಡಿರುವ ವಿವರಣೆಗಳು ಸಮರ್ಪಕವಾಗಿಲ್ಲ. ಇನ್ನು  ಬಿಬಿಎಂಪಿಯ ಆಸ್ತಿ ಮತ್ತು ಕಂದಾಯ ಹಣ ದೀರ್ಘಾವಧಿಗೆ ಸರ್ಕಾರ ಬಳಿ ಜಮೆಯಾಗುವುದು ಕಾನೂನಿಗೆ ವಿರುದ್ಧ. ಒಟ್ಟಾರೆಯಾಗಿ ಬಿಬಿಎಂಪಿ ತ್ರಿಭಜನೆ  ವಿಧೇಯಕ 199ರ ಸ್ಥಳೀಯ ಸಂಸ್ಥೆಗಳ  ಕಾಯ್ದೆಗೆ ವಿರುದ್ಧವಾಗಿದೆ ಎಂಬ ಭಾವನೆ ಕಾನೂನು ತಜ್ಞರ ಜತೆ ಚರ್ಚೆ ನಡೆಸಿದ ಸಂದರ್ಭದಲ್ಲಿ ವ್ಯಕ್ತವಾಗಿದ್ದು, ಈ ಬಗ್ಗೆ ರಾಷ್ಟ್ರಪತಿ ಭವನದಲ್ಲೇ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದು  ಮನವಿ ಮಾಡಿದ್ದಾರೆ ಎಂದು ಗೊತ್ತಾಗಿದೆ.

SCROLL FOR NEXT