ಜಿಲ್ಲಾ ಸುದ್ದಿ

ರಾಘವೇಶ್ವರ ಶ್ರೀ ಪ್ರಕರಣ: ವಿಚಾರಣೆಗೆ ದೂರುದಾರರು ಹಾಜರು

Shilpa D

ಶಿವಮೊಗ್ಗ: ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳಿಂದ ಅತ್ಯಾಚಾರಕ್ಕೆ ಒಳಗಾಗಿದ್ದಾರೆ ಎನ್ನಲಾಗಿರುವ ಸಂತ್ರಸ್ತೆಯ ಪತಿ ಹಾಗೂ ಮಗಳು ಬುಧವಾರ ಸಂಜೆ ನಗರದ ಜಿಲ್ಲಾ ರಕ್ಷಣಾಧಿಕಾರಿ ಕಚೇರಿಗೆ ವಿಚಾರಣೆಗೆ ಆಗಮಿಸಿದ್ದರು. ಕಳೆದ ವರ್ಷ ಸ್ವಾಮೀಜಿಯವರ ಬೆಂಬಲಿಗರು ಸಾಗರದಲ್ಲಿ ಸಭೆ ನಡೆಸಿದಾಗ ದೂರುದಾರರ ಬಂಧು ಗಳ ಮೇಲೆ ಹಲ್ಲೆ ಯತ್ನ ನಡೆಸಿದ್ದರು ಎಂದು ಇವರು ಪೊಲೀಸ್ ಮಹಾನಿರ್ದೇಶಕರಿಗೆ
ದೂರು ಸಲ್ಲಿಸಿದ್ದರು. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ದೂರುದಾರರ ವಿರುದ್ಧ ಅಶ್ಲೀಲವಾಗಿ ಚಿತ್ರಗಳನ್ನು ಪೊಸ್ಟ್ ಮಾಡಿನಿರಂತರವಾಗಿ ಕೆಟ್ಟದಾಗಿ ಅಭಿಪ್ರಾಯ ಗಳನ್ನು ಹಾಕ ಲಾಗಿತ್ತು ಎಂದು ಆರೋಪಿಸಿದ್ದರು. ಈ ದೂರನ್ನು ಜಿಲ್ಲಾ ರಕ್ಷಣಾಧಿಕಾರಿಗಳಿಗೆ ರವಾನಿಸಿ ವಿಚಾರಣೆ ನಡೆಸುವಂತೆ ಸೂಚಿಸಲಾಗಿತ್ತು. ಅದರಂತೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು.

ವಿಚಾರಣೆ ಹಾದಿ ತೃಪ್ತಿ: ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪತಿ, ವಿಚಾರಣೆ ನಡೆಯುತ್ತಿರುವ ರೀತಿ ತೃಪ್ತಿ ತಂದಿದೆ. ಆದರೆ ದೂರು ಕೊಟ್ಟಿರುವ ನಾವು ಮಾತ್ರ ಹತ್ತಾರು ಬಾರಿ ವಿಚಾರಣೆಗೆ ಬರುತ್ತಿದ್ದೇನೆ. ಯಾರು ಆರೋಪಿಗಳೋ ಅವರನ್ನು ಮಾತ್ರ ಕೆಲವೇ ಬಾರಿ ವಿಚಾರಣೆಗೆ ಕರೆಯಿಸುತ್ತಿದ್ದಾರೆ. ಇದು ಬೇಸರದ ಸಂಗತಿ ಎಂದು ಹೇಳಿದರು.

ಶ್ರೀ ಪೀಠತ್ಯಾಗಕ್ಕೆ ಸಮಾನ ಮನಸ್ಕರ ಒತ್ತಾಯ

 ರಾಮಚಂದ್ರಾರಪುರ ಮಠಾಧೀಶ ರಾಘವೇಶ್ವರ ಭಾರತೀ ಸ್ವಾಮೀಜಿಯವರು ಪೀಠತ್ಯಾಗ ಮಾಡುವಂತೆ ಹವ್ಯಕ ಸಮಾನ ಮನಸ್ಕರ ಚಿಂತನ ಮಂಥನ ಸಭೆ ಯಲ್ಲಿ ಒತ್ತಾಯ ಕೇಳಿಬಂತು. ಕೊಂದಲಕಾಡು ನಾರಾಯಣ ಭಟ್‍ರ ಮನೆಯಲ್ಲಿ ನಡೆದ ಸಭೆಯಲ್ಲಿ ಸ್ವಾಮೀಜಿ ಎದುರಿಸುತ್ತಿರುವ ಅತ್ಯಾಚಾರ ಆರೋಪ ಪ್ರಕರಣದ ಕುರಿತು ವಿಸ್ತೃತ ಚರ್ಚೆ ನಡೆಯಿತು. ಶ್ರೀ ರಾಘವೇಶ್ವರ ಸ್ವಾಮೀಜಿಪೀಠ ತ್ಯಾಗ ಮಾಡಬೇಕು ಮತ್ತು ದಿವಂಗತ ಶ್ಯಾಮ ಶಾಸ್ತ್ರಿ ಅವರ ಕುಟುಂಬಕ್ಕೆ ಹಾಕಿರುವ ಅಘೋಷಿತ ಬಹಿಷ್ಕಾರ ಮುಕ್ತವಾಗಬೇಕು, ಈ ಅನಾಗರಿಕ ಬಹಿಷ್ಕಾರಿಗಳನ್ನು ಸಮಾಜ ಅನಾದರಿಸಬೇಕು ಎಂದು ಆಗ್ರಹಿಸಲಾಯಿತು. ಅನಾಚಾರದ ಆರೋಪಕ್ಕೆ ಗುರಿಯಾ ದವರು ತಾವಾಗಿಯೇ ಪೀಠತ್ಯಾಗ ಮಾಡ ಬೇಕು. ಅದು ಆಗದಿದ್ದರೆ ಅವರನ್ನು ಪೀಠ ದಿಂದ ಕೆಳಗಿಳಿಸಬೇಕು ಎಂದು ಕೈಂತಜೆ ವಿಷ್ಣು ಭಟ್ ಹೇಳಿದರು. ಕುಮಟಾದ ಹಿರಿಯ ಹವ್ಯಕ ಮುಖಂಡ ಡಾ.ಟಿ.ಟಿ ಹೆಗಡೆ ಮಾತನಾಡಿ, ನಮಗೆ ಗುರುಗಳು ಎಂಬವರು ಧರ್ಮವನ್ನು ಹೇಳಿಕೊಡಲು ಬೇಕು ಹೊರತು ಐಶ್ವರ್ಯ, ಅಲಂಕಾರ, ಮನ್ನಣೆಯ ಹಿಂದೆ ಬೀಳುವವರಲ್ಲ. ಗೋಯಾತ್ರೆ, ರಾಮಸತ್ರ, ರಾಮಕಥೆಗಿಂತ ಮೊದಲು ಪೀಠಾಧಿಕಾರಿಯಾದವರಿಗೆ ಅನುಷ್ಠಾನ ಮುಖ್ಯವಾಗಬೇಕು ಎಂದರು. ಮಠದಲ್ಲಿ ಪೀಠನಿಷ್ಠರನ್ನು ಉಪಾಯದಿಂದ ಹೊರಹಾಕಿ ವ್ಯಕ್ತಿನಿಷ್ಠರನ್ನು ಮಾತ್ರ ಉಳಿಸಿಕೊಳ್ಳಲಾಗಿದೆ ಎಂದು ಸಹಕಾರಿ ಧುರೀಣ ಮಂಜುನಾಥ ಹೊಸಬಾಳೆ ಆರೋಪಿಸಿದರು.

SCROLL FOR NEXT