ಬೆಂಗಳೂರು: ಮೈಸೂರಿನ ಕೆ.ಎಂ.ಹಳ್ಳಿಯಲ್ಲಿ ನಡೆದ ಕೋಮು ಘರ್ಷಣೆ ಪ್ರಕರಣದಲ್ಲಿ ಭಾಗಿಯಾದ ಆರೋಪ ಹೊತ್ತಿದ್ದ ಕೆಎಫ್ ಡಿ ಹಾಗೂ ಪಿಎಫ್ಐ ಸಂಘಟನೆ ಕಾರ್ಯಕರ್ತರ ವಿರುದ್ಧ ಪ್ರಕರಣವನ್ನು ಅಭಿಯೋಜನೆಯಿಂದ ಕೈ ಬಿಡುವ ನಿರ್ಧಾರವನ್ನು ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರ ತೆಗೆದುಕೊಂಡಿದೆ.
ಈ ಪ್ರಕರಣದ ಜತೆಗೆ ಶಿವಮೊಗ್ಗ ಮತ್ತು ಹಾಸನದಲ್ಲಿ ನಡೆದ ಕೋಮು ಗಲಭೆ ಪ್ರಕರಣದಲ್ಲಿ ಭಾಗಿಯಾ 1400 ಆರೋಪಿಗಳ ವಿರುದ್ಧ ಪ್ರಕರಣವನ್ನೂ ಅಭಿಯೋಜನೆಯಿಂದ ಕೈ ಬಿಡಲು ಸರ್ಕಾರ ನಿರ್ಧರಿಸಿದೆ. ಪತ್ರಿಕೆಯೊಂದರಲ್ಲಿ 2010 ರಲ್ಲಿ ಪ್ರಕಟವಾದ ಮುಸ್ಲಿಂ ಲೇಖಕಿ ತಸ್ಲಿಮಾ ನಸ್ರೀನ್ ಅವರ `ಪರ್ದಾ ಏ ಪರ್ದಾ' ಅನುವಾದಿತ ಲೇಖನ ಪ್ರಕಟಗೊಂಡ ಹಿನ್ನೆಲೆಯಲ್ಲಿ ಶಿವಮೊಗ್ಗ ಮತ್ತು ಹಾಸನದಲ್ಲಿ ಕೋಮು ಗಲಭೆ ನಡೆದಿತ್ತು.
ಶಿವಮೊಗ್ಗ ಜಿಲ್ಲೆಯಲ್ಲಿ 114 ಮತ್ತು ಹಾಸನದಲ್ಲಿ 21 ಪ್ರಕರಣಗಳು ದಾಖಲಾಗಿದ್ದವು. ಒಟ್ಟು 1400 ಜನರ ವಿರುದಟಛಿ ಮೊಕದ್ದಮೆ ದಾಖಲಾಗಿತ್ತು. ಪ್ರಕರಣವನ್ನು ಅಭಿಯೋಜನೆಯಿಂದ ಹಿಂಪಡೆಯುವುದಕ್ಕೆ ಸಚಿವ ಸಂಪುಟ ಉಪಸಮಿತಿ ಶಿಫಾರಸು ಮಾಡಿತ್ತು.
ಆದರೆ ಮೈಸೂರು ಜಿಲ್ಲೆ ಕೆ.ಎಂ.ಹಳ್ಳಿಯಲ್ಲಿ 2009ರ ಏಪ್ರಿಲ್‍ನಲ್ಲಿ ನಡೆದ ಕೋಮು ಘರ್ಷಣೆ ಸಂಬಂಧ ಉದಯಗಿರಿ ಠಾಣೆಯಲ್ಲಿ ಪಿಎಫ್ಐ ಮತ್ತು ಕೆಎಫ್ ಡಿ ಕಾರ್ಯಕರ್ತರ ವಿರುದ್ಧ 40 ಪ್ರಕರಣಗಳು ದಾಖಲಾಗಿತ್ತು. ಈ ಪೈಕಿ 2 ಕೊಲೆ ಪ್ರಕರಣವನ್ನು ಹೊರತು ಪಡಿಸಿ ಉಳಿದ 38 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಈ ಎರಡು ಸಂಘಟನೆಯ 214 ಕಾರ್ಯಕರ್ತರ ವಿರುದ್ಧದ ಪ್ರಕರಣವನ್ನು ಅಭಿಯೋಜನೆಯಿಂದ ಹಿಂಪಡೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಆದರೆ ಯಾವ ಕಾರಣಕ್ಕೆ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ ಎಂಬ ಸ್ಪಷ್ಟನೆ ನೀಡಲು ಸಂಪುಟ ಸಭೆ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ. ಜಯಚಂದ್ರ ಹಿಂದೇಟು ಹಾಕಿದರು.
ಒಂದು ಕೋಮಿಗೆ ಅನುಕೂಲ ಕಲ್ಪಿಸಲು ಸರ್ಕಾರ ಮುಂದಾಗಿದೆಯೇ? ಎಂಬ ಸುದ್ದಿಗಾರರ ಪ್ರಶ್ನೆಗೆ ಜಯಚಂದ್ರ ಉತ್ತರಿಸಲು ನಿರಾಕರಿಸಿದರು. `ಇದು ಸಂಪುಟದ ನಿರ್ಧಾರ' ಎಂದಷ್ಟೇ ಹೇಳಿದರು.