ಬೆಂಗಳೂರು: ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಯ ವರದಿ ಎರಡು ತಿಂಗಳಲ್ಲಿ ತಯಾರಾಗಲಿದ್ದು, ರಾಜ್ಯದಲ್ಲಿ ಯಾವ ಜಾತಿಗಳ ಜನರು ಹಿಂದುಳಿದಿದ್ದಾರೆ ಎಂಬ ನಿಖರ ಮಾಹಿತಿ ಲಭ್ಯವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ರಾಜ್ಯ ತಿಗಳರ ಸಾರ್ವಜನಿಕ ವಿದ್ಯಾಭಿವೃದ್ಧಿ ಸಂಘ ರಾಜಾಜಿನಗರ ಬೆಂಗಳೂರು ಸಂಘದ ಆಶ್ರಯದಲ್ಲಿ ನಿರ್ಮಿಸಿರುವ ಬಾಲಕಿಯರ ವಿದ್ಯಾರ್ಥಿನಿ ನಿಲಯ ಹಾಗೂ ಮಹಿಳಾ ಪದವಿ ಕಾಲೇಜಿನ ನೂತನ ನಾಲ್ಕನೇ ಅಂತಸ್ತಿನ ಕಟ್ಟಡವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು. ಸರ್ವರಿಗೂ ಸಮಪಾಲು, ಸಮಬಾಳು ಎಂಬ ಘೊಷಣೆ ಸಂವಿಧಾನದಲ್ಲಿದ್ದು, ಇದನ್ನು ಪಾಲಿಸಲು ಸಾಮಾಜಿಕ- ಶೈಕ್ಷಣಿಕ ಸಮೀಕ್ಷೆ ನಡೆಸಲಾಗಿದೆ. ಸಂಪತ್ತು ಸಮಾನವಾಗಿ ಹಂಚಿಕೆಯಾಗಬೇಕಿದ್ದು, ವಿವಿಧ ಜಾತಿಯ ಜನರ ಆರ್ಥಿಕ, ಸಾಮಾಜಿಕ ಸ್ಥಿತಿಯ ಬಗ್ಗೆ ನಿಖರವಾದ ಮಾಹಿತಿ ಪಡೆಯಬೇಕಿದೆ.
ಸ್ವಾತಂತ್ರ್ಯದ ನಂತರ ರಾಜ್ಯದಲ್ಲಿ ಯಾವುದೇ ಜಾತಿ ಸಮೀಕ್ಷೆ ನಡೆಸಿಲ್ಲ. ಹಳೆಯ ಗಣತಿಯನ್ನೇ ಪರಿಗಣಿಸಿ ಯೋಜನೆ ರೂಪಿಸುತ್ತಿರುವುದರಿಂದ ಸಮಾನ ಹಂಚಿಕೆ ಸಾಧ್ಯವಾಗುತ್ತಿಲ್ಲ. ಈಗ ನಡೆಸಿರುವ ಸಮೀಕ್ಷೆಯಿಂದ ಎರಡು ತಿಂಗಳಲ್ಲಿ ನಿಖರ ಮಾಹಿತಿ ಲಭ್ಯವಾಗಲಿದ್ದು, ಸರ್ಕಾರಿ ಯೋಜನೆಗಳನ್ನು ಇದೇ ಮಾಹಿತಿ ಆಧಾರದ ಮೇಲೆ ಜಾರಿ ಮಾಡಲಾಗುತ್ತದೆ. ಮಾಹಿತಿ ನಿಖರವಾಗಿದ್ದರೆ ಮಾತ್ರ ಸೂಕ್ತ ಯೋಜನೆ ರೂಪಿಸಬಹುದು. ಸಮೀಕ್ಷೆ ನಡೆಸಿ ಜಾತಿ ವ್ಯವಸ್ಥೆಯನ್ನು ಬೆಳೆಸುತ್ತಿದ್ದಾರೆ ಎಂಬ ಟೀಕೆ ಕೇಳಿಬಂದಿದೆ. ಆದರೆ ಇದುವರೆಗೆ ಸಮೀಕ್ಷೆ ನಡೆಸದಿದ್ದರೂ, ಸಮಾಜದಲ್ಲಿ ಜಾತಿ ಹಾಗೆಯೇ ಉಳಿದಿದೆ ಎಂದರು.
ಖಾಸಗೀಕರಣದಿಂದ ಜನರು ತಮ್ಮ ಹಿಂದಿನ ವೃತ್ತಿಯನ್ನು ಕೈ ಬಿಟ್ಟಿದ್ದಾರೆ. ಕೈಗಾರೀಕರಣ ಹೆಚ್ಚಿದ ನಂತರ ಕೃಷಿ ನಂಬಿ ಬದುಕುವವರು ಭೂಮಿ ಕಳೆದುಕೊಂಡಿದ್ದಾರೆ. ಹೀಗಾಗಿ ಹೊಸದಾದ ವೃತ್ತಿಯನ್ನು ಎಲ್ಲರೂ ಅವಲಂಬಿಸಬೇಕಾಗಿದೆ. ಗುಣಮಟ್ಟದ ಶಿಕ್ಷಣ ಪಡೆಯುವುದು ಈ ಸಮಸ್ಯೆಗೆ ಪರಿಹಾರವಾಗಿದೆ. ಸರ್ಕಾರಿ ಕೆಲಸದಲ್ಲೂ ಕಡಿಮೆ ಅವಕಾಶವಿರುವುದರಿಂದ ಹೆಚ್ಚಿನವರು ಖಾಸಗಿ ಕ್ಷೇತ್ರದಲ್ಲೇ ಉದ್ಯೋಗ ಪಡೆಯಬೇಕಿದೆ. ಆದರೆ ಖಾಸಗಿಯಲ್ಲಿ ಅತಿಯಾದ ಸ್ಪರ್ಧೆಯಿರುವುದರಿಂದ ಉದ್ಯೋಗ ಪಡೆಯಲು ಉತ್ತಮ ಶಿಕ್ಷಣ ಪಡೆಯಬೇಕು. ಕುಟುಂಬದಲ್ಲಿ ಮಹಿಳೆಯರನ್ನೂ ಅಕ್ಷರಸ್ಥರನ್ನಾಗಿ ಮಾಡಬೇಕು. ಶಿಕ್ಷಣದ ಕಡೆ ಹೆಚ್ಚಿನ ಗಮನಹರಿಸಿದರೆ ಮಾತ್ರ ಸಾಮಾಜಿಕ ಪರಿಸ್ಥಿತಿ ಉತ್ತಮವಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಬೇಡಿಕೆಗೆ ಸ್ಪಂದನೆ: ವಿದ್ಯಾರ್ಥಿನಿಲಯ ಆರಂಭಿಸಲು ಸರ್ಕಾರದಿಂದ ಜಾಗ ನೀಡಬೇಕು ಎಂದು ತಿಗಳರ ಸಂಘದ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ, ಬಿಡಿಎ ವತಿಯಿಂದ ಸಿಎ ನಿವೇಶನಗಳನ್ನು ಹಂಚಲಾಗುತ್ತಿದೆ. ಸಂಘದ ವತಿಯಿಂದ ನಿವೇಶನಕ್ಕೆ ಅರ್ಜಿ ಸಲ್ಲಿಸಿದರೆ ಭೂಮಿ ನೀಡುವುದಕ್ಕೆ ಶಿಫಾರಸು ಮಾಡಲಾಗುವುದು ಎಂದರು. ಸಚಿವರಾದ ಎಚ್.ಆಂಜನೇಯ. ಡಿ.ಕೆ.ಶಿವಕುಮಾರ್, ಶಾಸಕ ಎಚ್.ಎಂ.ರೇವಣ್ಣ, ಮಾಜಿ ಶಾಸಕ ನರೇಂದ್ರ ಬಾಬು, ತಿಗಳ ಕ್ಷತ್ರಿಯ ಮಹಾಸಭಾ ಅಧ್ಯಕ್ಷ ಎಚ್. ಸುಬ್ಬಣ್ಣ ಹಾಜರಿದ್ದರು.