ಬೆಂಗಳೂರು: ವಜ್ರೇಶ್ವರಿ ಕಂಬೈನ್ಸ್ ಅಕೌಂಟೆಂಟ್ ಆತ್ಮಹತ್ಯೆ ಪ್ರಕರಣ ಸಂಬಂಧ ನಟ ಹಾಗೂ ನಿರ್ಮಾಪಕ ರಾಘವೇಂದ್ರ ರಾಜ್ ಕುಮಾರ್ ದಂಪತಿಗೆ ನ್ಯಾಯಾಲಯ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿದೆ.
ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ವಜ್ರೇಶ್ವರಿ ಕಂಬೈನ್ಸ್ ಸಂಸ್ಥೆ ಮಾಲೀಕರಾದ ರಾಘವೇಂದ್ರ ರಾಜ್ ಕುಮಾರ್ ಮತ್ತು ಅವರ ಪತ್ನಿ ಮಂಗಳಾಗೆ ಬೆಂಗಳೂರಿನ ಸೆಷನ್ಸ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಮತ ಅಕೌಂಟೆಂಟ್ ಉಮೇಶ್ ಪುತ್ರ ವಿನಾಯಕ್ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.ಈ ಹಿನ್ನೆಲೆಯಲ್ಲಿ ನಿರೀಕ್ಷಣಾ ಜಾಮೀನು ನೀಡುವಂತೆ ರಾಘಣ್ಣ ದಂಪತಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ತ್ಯಾಗರಾಜನಗರ ಸಮೀಪದ ನಾಗಸಂದ್ರ ನಿವಾಸಿ, ಉಮೇಶ್, ಕಾಟನ್ ಪೇಟೆ ಮುಖ್ಯ ರಸ್ತೆಯ ಮಂಜುನಾಥ ಪ್ಯಾರಡೈಸ್ ಲಾಡ್ಜ್ ನಲ್ಲಿ ನಿನ್ನೆ ಆತ್ಮಹತ್ಯೆ ಮಾಡಿಕೊಂಡಿದ್ದರು.
ಇತ್ತೀಚೆಗೆ ಸಂಸ್ಥೆಯಲ್ಲಿ ಹಣ ದುರುಪಯೋಗವಾಗಿರುವ ವಿಷಯದ ಬಗ್ಗೆ ತೀವ್ರ ಒತ್ತಡಕ್ಕೆ ಒಳಗಾಗಿದ್ದ ಉಮೇಶ್, ಮಂಗಳವಾರ ಎಂದಿನಂತೆ ಕಚೇರಿಗೆ ಹೋಗುವುದಾಗಿ ಮನೆಯಿಂದ ಹೋಗಿದ್ದರು. ಆದರೆ, ಮಧ್ಯಾಹ್ನದ ವೇಳೆಗೆ ಮೊಬೈಲ್ ಫೋನ್ ನಾಟ್ ರಿಚೇಬಲ್ ಆಗಿತ್ತು. ಕೊನೆಗೆ ಪೊಲೀಸರ ಮೂಲಕ ಗುರುವಾರ ಸಂಜೆ ಕುಟುಂಬ ಸದಸ್ಯರಿಗೆ ಮಾಹಿತಿ ತಲುಪಿದೆ ಎಂದು ಪೊಲೀಸರು ಹೇಳಿದ್ದಾರೆ.