ಬೆಂಗಳೂರು: ಪ್ರಸಕ್ತ ಸಾಲಿನಲ್ಲಿ ನಗರದಲ್ಲಿ ಬಿಬಿಎಂಪಿ ವತಿಯಿಂದ 45 ಸಾವಿರ ಸಸಿಗಳನ್ನು ನೆಡಲಾಗುತ್ತಿದ್ದು, ಮಳೆಗೆ ಬೀಳದ ಗಟ್ಟಿಮುಟ್ಟಾದ ಮರಗಳನ್ನೇ ಆರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ವಿಶ್ವ ಪರಿಸರ ದಿನದ ಅಂಗವಾಗಿ ಬಿಬಿಎಂಪಿ ಅರಣ್ಯ ಘಟಕ ಹಾಗೂ ಕೇಂದ್ರ ಸಶಸuಉ ಮೀಸಲು ಪಡೆ(ದಕ್ಷಿಣ) ಆಯೋಜಿಸಿದ್ದ ಕಾರ್ಯದಲ್ಲಿ ಮಾತನಾಡಿ, ಈ ಸಾಲಿನಲ್ಲಿ ಬಿಬಿಎಂಪಿಯಿಂದ 45 ಸಾವಿರ ಸಸಿಗಳನ್ನು ನೆಡಲಾಗುತ್ತಿದೆ. ಇತ್ತೀಚೆಗೆ ನಗರದಲ್ಲಿ ಸುರಿದ ಮಳೆಯಿಂದ ಮರಗಳು ಬೀಳುತ್ತಿವೆ. ಈ ಬಾರಿ ಗಟ್ಟಿಮುಟ್ಟಾದ ಮರಗಳನ್ನು ವೈಜ್ಞಾನಿಕವಾಗಿ ಗುರುತಿಸಿ, ಹಲವು ವರ್ಷಗಳವರೆಗೆ ಬಾಳಿಕೆ ಬರುವ ಗಿಡಗಳನ್ನು ಮಾತ್ರ ನೆಡಲು ತೀರ್ಮಾನಿಸಲಾಗಿದೆ.
ಪರಿಸರ ತಜ್ಞರೊಂದಿಗೆ ಚರ್ಚಿಸಿದ್ದು, ಉತ್ತಮ ಪರಿಸರ ನಿರ್ಮಾಣವಾಗಲು ಸಹಾಯಕವಾದ ಸಸಿಗಳನ್ನು ನೆಡಲು ಒತ್ತು ನೀಡಲಾಗಿದೆ. ನಗರದಲ್ಲಿ ಹಕ್ಕಿಗಳ ಸಂಖ್ಯೆ ಕ್ರಮೇಣವಾಗಿ ಕಡಿಮೆಯಾಗುತ್ತಿದೆ. ಹಕ್ಕಿಗಳಿಗೆ ಆಹಾರ ನೀಡುವ ಸಸಿಗಳನ್ನು ಹೆಚ್ಚಾಗಿ ನೆಟ್ಟು ಹಕ್ಕಿಗಳ ಸಂತಾನ ಅಭಿವೃದ್ಧಿಯಾಗುವಂತೆ ಮಾಡಬೇಕಿದೆ. ಪರಿಸರ ದಿನಾಚರಣೆ ಸರ್ಕಾರಿ ಕಾರ್ಯಕ್ರಮವಾಗದೆ ಸಾರ್ವಜನಿಕರೂ ಉತ್ಸಾಹದಿಂದ ಪಾಲ್ಗೊಳ್ಳಬೇಕು. ನಗರದಲ್ಲಿ ಪರಿಸರದ ಉಳಿವಿಗೆ ಸಾರ್ವಜನಿಕರೂ ಕೈಜೋಡಿಸ ಬೇಕು ಎಂದರು. ಬಿಬಿಎಂಪಿ ಆಡಳಿತಾಧಿಕಾರಿ ಟಿ.ಎಂ.ವಿಜಯಭಾಸ್ಕರ್, ಆಯುಕ್ತ ಜಿ. ಕುಮಾರ್ ನಾಯಕ್ ಹಾಜರಿದ್ದರು.
1079 ದೂರು : ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಸುರಿದ ಮಳೆಯಿಂದ ನಗರದಲ್ಲಿ ಮರ, ಕೊಂಬೆಗಳು ಬಿದ್ದಿದ್ದು, 1079 ದೂರುಗಳು ಬಿಬಿಎಂಪಿ ನಿಯಂತ್ರಣ ಕೊಠಡಿಯಲ್ಲಿ ದಾಖಲಾಗಿದೆ. ದಕ್ಷಿಣ, ಪೂರ್ವ, ಪಶ್ಚಿಮ ಹಾಗೂ ಯಲಹಂಕ ವಲಯಗಳಲ್ಲಿ ಅಧಿಕ ದೂರು ದಾಖಲಾಗಿವೆ. ಈ ಸಾಲಿನ ಕ್ರಿಯಾಯೋಜನೆಯಲ್ಲಿ ಹೆಚ್ಚುವರಿಯಾಗಿ 1,70,000 ಸಾವಿರ ಸಸಿಗಳನ್ನು ನೆಡಲು ತೀರ್ಮಾನಿಸಲಾಗಿದೆ. ಆದರೆ ನರ್ಸರಿಗಳಲ್ಲಿ ಸಸಿ ಲಭ್ಯತೆ ಇಲ್ಲದಿರುವುದರಿಂದ, ಸಸ್ಯಗಳನ್ನು ಖರೀದಿಸಿ ನೆಡಲಾಗುವುದು.