ಜಿಲ್ಲಾ ಸುದ್ದಿ

ಗುರುತಿನ ಚೀಟಿ, ಇಎಸ್‍ಐ ನೀಡದ ಗುತ್ತಿಗೆದಾರನಿಗೆ ರು.25ಸಾವಿರ ದಂಡ

ಬೆಂಗಳೂರು: ಪೌರಕಾರ್ಮಿಕರಿಗೆ ಗುರುತಿನ ಚೀಟಿ ಹಾಗೂ ಇಎಸ್‍ಐ ನೀಡದ ರಾಜಾಜಿನಗರದ ಗುತ್ತಿಗೆದಾರನಿಗೆ ಬಿಬಿಎಂಪಿ ಆಡಳಿತಾಧಿಕಾರಿ ಟಿ.ಎಂ.ವಿಜಯಭಾಸ್ಕರ್ ರು.25 ಸಾವಿರ ದಂಡ ವಿಧಿಸಿದ್ದಾರೆ.

ತೀವ್ರ ಸ್ವಚ್ಛತಾ ಅಭಿಯಾನದ ಅಂಗವಾಗಿ ಆಡಳಿತಾಧಿಕಾರಿ ವಿಜಯಭಾಸ್ಕರ್ ಹಾಗೂ ಆಯುಕ್ತ ಜಿ. ಕುಮಾರ್ ನಾಯಕ್ ರಾಜಾಜಿನಗರ, ಬಸವನಗುಡಿ, ಪದ್ಮನಾಭನಗರ ವಾರ್ಡ್‍ಗಳಲ್ಲಿ ಪರಿಶೀಲನೆ ನಡೆಸಿದರು. ರಾಜಾಜಿನಗರದ ಶ್ರೀರಾಂಪುರ 7ನೇ ಮುಖ್ಯರಸ್ತೆಗೆ ಭೇಟಿ ನೀಡಿ ಪೌರ ಕಾರ್ಮಿಕರೊಂದಿಗೆ ಸಂವಾದ ನಡೆಸಲಾಯಿತು. ಪೌರ ಕಾರ್ಮಿಕರಿಗೆ ಕಾನೂನು ರೀತಿ ಸಿಗಬೇಕಾದ ಸೌಲಭ್ಯ, ಸಂಬಳ, ವಿಮೆ, ಸುರಕ್ಷಾ ಉಪಕರಣಗಳ ಬಗ್ಗೆ ವಿಚಾರಿಸಿದಾಗ, ಇಎಸ್‍ಐ ಹಾಗೂ ಗುರುತಿನ ಚೀಟಿ ನೀಡದಿರುವ ಬಗ್ಗೆ ಪೌರ ಕಾರ್ಮಿಕರು ದೂರಿದರು.

ಕೂಡಲೇ ಗುತ್ತಿಗೆದಾರನಿಗೆ ರು.25 ಸಾವಿರ ದಂಡ ವಿಧಿಸಿದ ಆಡಳಿತಾಧಿಕಾರಿ ವಿಜಯಭಾಸ್ಕರ್, ಎರಡು ದಿನಗಳೊಳಗೆ ಗುರುತಿನ ಚೀಟಿ, ಇಎಸ್‍ಐ ನೀಡಬೇಕು ಎಂದು ಸೂಚಿಸಿದರು. ನಂತರ ಮಲ್ಲೇಶ್ವರ, ರಾಜಾಜಿನಗರದ ಪ್ರಮುಖ ರಸ್ತೆ, ಪದ್ಮನಾಭನಗರಕ್ಕೆ ಭೇಟಿ ನೀಡಿ ತಪಾಸಣೆ ನಡೆಸಲಾಯಿತು. ಚರಂಡಿಯ ಹೂಳೆತ್ತುವಿಕೆ, ಕಸ ವಿಲೇವಾರಿ, ಬೀದಿಯಲ್ಲಿ ಬಿದ್ದ ಕಲ್ಲುಗಳನ್ನು ನಿರಂತರವಾಗಿ ವಿಲೇವಾರಿ ನಡೆಯಬೇಕೆಂದು ಪೌರಕಾರ್ಮಿಕರು ಹಾಗೂ ಗುತ್ತಿಗೆದಾರರಿಗೆ ಸೂಚಿಸಲಾಯಿತು.

SCROLL FOR NEXT