ಜಿಲ್ಲಾ ಸುದ್ದಿ

ಹೊತ್ತಿ ಉರಿಯಿತು ಮಿಠಾಯಿ ಅಂಗಡಿ

ಬೆಂಗಳೂರು: ಮಾಗಡಿ ರಸ್ತೆ ಕೆಂಪಾಪುರ ಅಗ್ರಹಾರ ಸಮೀಪದ ನೇತಾಜಿ ನಗರದಲ್ಲಿ ಮಿಠಾಯಿ ತಯಾರಿಕಾ ಘಟಕದಲ್ಲಿ ಭಾನುವಾರ ಸಂಜೆ ಗ್ಯಾಸ್ ಸಿಲಿಂಡರ್ ಸೋರಿಕೆಯಿಂದ ಅಗ್ನಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ನೇತಾಜಿ ನಗರದಲ್ಲಿರುವ 20/30 ಅಳತೆಯ ಜಾಗದಲ್ಲಿರುವ 2 ಮಹಡಿ ಕಟ್ಟಡದಲ್ಲಿ ರಾಜಣ್ಣ ಎಂಬುವರ ಮಿಠಾಯಿ ತಯಾರಿಕೆ ಘಟಕವಿದೆ. ಇಲ್ಲಿ ಮೈಸೂರು ಪಾಕ್ ಸೇರಿದಂತೆ ಚಿಲ್ಲರೆ ಅಂಗಡಿಗಳಿಗೆ ಮಾರಾಟ ಮಾಡುವ ಸಿಹಿ ತಿನಿಸುಗಳನ್ನು ತಯಾರಿಸಲಾಗುತ್ತಿತ್ತು. ಭಾನುವಾರ ರಜಾ ದಿನವಾಗಿದ್ದರಿಂದ ಕಾರ್ಮಿಕರಾರೂ ಇರಲಿಲ್ಲ. ಈ ವೇಳೆ ಸಿಲಿಂಡರ್ ಸೋರಿಕೆಯಿಂದ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿತು. ಇದನ್ನು ಗಮನಿಸಿದ ಸ್ಥಳೀಯರು ಪೊಲೀಸ್ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದರು.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ 8 ವಾಹನಗಳು ಹಾಗೂ 40 ಸಿಬ್ಬಂದಿ 1 ತಾಸಿಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. `ಮಿಠಾಯಿ ತಯಾರಿಕಾ ಘಟಕ ಅತ್ಯಂತ ಕಿರಿದಾದ ಪ್ರದೇಶದಲ್ಲಿದೆ. ಹೀಗಾಗಿ, ನಮ್ಮ ವಾಹನಗಳು ಸ್ಥಳಕ್ಕೆ ಧಾವಿಸಲು ಸಾಧ್ಯವಾಗಲಿಲ್ಲ. ಸುಮಾರು 200 ಅಡಿ ದೂರದಲ್ಲೇ ವಾಹನಗಳನ್ನು ನಿಲ್ಲಿಸಿ ಘಟಕದವರೆಗೆ ಪೈಪ್ ಸಂಪರ್ಕ ಮಾಡಿಕೊಂಡು ಬೆಂಕಿ ನಂದಿಸಲಾಯಿತು.

ಕಿರಿದಾದ ರಸ್ತೆ ಜತೆಗೆ ಅಕ್ಕಪಕ್ಕದಲ್ಲಿ ಮನೆಗಳಿವೆ. ಹೀಗಾಗಿ, ಅಗ್ನಿನಂದಿಸುವ ಕಾರ್ಯಾಚರಣೆ ಸವಾಲಿನದ್ದಾಗಿತ್ತು' ಎಂದು ಬೆಂಕಿ ನಿಯಂತ್ರಣ ನೇತೃತ್ವ ವಹಿಸಿದ ಮುಖ್ಯ ಅಗ್ನಿಶಾಮಕ ಅಧಿಕಾರಿ ಬಸವಣ್ಣ ತಿಳಿಸಿದರು. ಕಟ್ಟಡದ ಒಳಗೆ ಮೂರು ಸಿಲಿಂಡರ್‍ಗಳು ಸೋರಿಕೆಯಾಗಿರುವುದು ಕಂಡು ಬಂದಿದೆ. ಈ ಘಟಕಕ್ಕೆ ಬಾಗಿಲುಗಳು ಮಾತ್ರ ಇದ್ದು ಕಿಟಕಿಗಳಿಲ್ಲ. ಹೀಗಾಗಿ, ಕಟ್ಟಡದ ಒಳಗೆ ನುಗ್ಗಿ ಬೆಂಕಿ ನಂದಿಸಲು ಕಷ್ಟವಾಯಿತು. ಈ ಸಂಬಂಧ ಕೆಪಿ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

SCROLL FOR NEXT