ಬೆಂಗಳೂರು: ಕಳೆದ ಎರಡು ಎರಡು ವರ್ಷದಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆದಿರುವ ಹಲವು ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ಕೂಡಿದ್ದು, ಇದರ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಆಮ್ ಆದ್ಮಿ ಪಕ್ಷದ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆದಿರುವ ಬಹುತೇಕ ಕಾಮಗಾರಿಗಳು ಕಳೆಪೆಯಾಗಿದ್ದು, ಕಾರ್ಪೋರೇಟರ್ ಗಳು, ಗುತ್ತಿಗೆದಾರರು ಮತ್ತು ಎಂಜಿನಿಯರ್ ಗಳ ಒಳ ಒಪ್ಪಂದದಲ್ಲಿ ಈ ಕಳೆಪೆ ಮಟ್ಟದ ಕಾಮಗಾರಿಗಳು ನಡೆದಿವೆ ಎಂದು ಆರೋಪಿಸಿದ್ದಾರೆ.
10 ಲಕ್ಷಕ್ಕಿಂತ ಹೆಚ್ಚು ಮೊತ್ತದ ಕಾಮಗಾರಿ ನಡೆಸುವಾಗ ನಿಯಮಗಳನ್ನು ಉಲ್ಲಂಘನೆಯಾಗಿದ್ದು, ಪಾರದರ್ಶಕತೆ ಮತ್ತು ಗುಣಮಟ್ಟ ಕಾಪಾಡದೆ, ಮನಬಂದಂತೆ ಕಾಮಗಾರಿ ನಡೆಸಿ ಬೊಕ್ಕಸಕ್ಕೆ ಸಾವಿರಾರು ಕೋಟಿ ರೂ. ನಷ್ಟಉಂಟು ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ಸಮಗ್ರ ತನಿಖೆ ನಡೆಸಲು ಸ್ವತಂತ್ರ ಆಯೋಗ ರಚನೆ ಮಾಡಬೇಕು ಎಂದ ಅವರು, ಬಿಬಿಎಂಪಿ ಆಡಳಿತಧಿಕಾರಿ ವಿಜಯ್ಭಾಸ್ಕರ್ ಹಾಗೂ ಆಯುಕ್ತ ಕುಮಾರ್ ನಾಯಕ್ ಅವರುಗಳು ಈ ಬಗ್ಗೆ ನಿವೃತ್ತ ಸರ್ಕಾರಿ ಎಂಜಿನಿಯರ್ಗಳು ಮತ್ತು ನಾಗರೀಕ ಸಮಾಜದ ಪ್ರತಿನಿಧಿಗಳನ್ನು ಒಳಗೊಂಡ ಆಯೋಗ ರಚನೆ ಮಾಡಿ ಸತ್ಯಾಂಶ ಬಯಲಿಗೆಳೆಯಬೇಕು ಎಂದು ಒತ್ತಾಯಿಸಿದ್ದಾರೆ.
ಜೋಗುಪಾಳ್ಯ ಶಾಲೆ, ನೀಲಸಂದ್ರ, ಗಂಗಾನಗರ, ಹುಳಿಮಾವು, ಶಂಕರಮಠ ಉದ್ಯಾನವನ ನವೀಕರಣ, ಸೇರಿದಂತೆ ಬಹುತೇಕ ಕಡೆ ಕಾಮಗಾರಿಗಳಲ್ಲಿ ಹಗರಣ ನಡೆದಿದೆ. ನಮ್ಮ ಪಕ್ಷದ ಕಾರ್ಯಕರ್ತರು ಸ್ವಯಂಪ್ರೇರಿತರಾಗಿ ನಗರದ ಅನೇಕ ಕಡೆ ನಡೆಸಿರುವ ಪರಿಶೀಲನೆ ವೇಳೆ ಇದು ಬೆಳಕಿಗೆ ಬಂದಿದೆ. 30, 4 , 2015ರ ವರೆಗಿನ ಎಲ್ಲಾ ಬಾಕಿ ಇರುವ ಕಾಮಗಾರಿಗಳ ವಿವರವನ್ನು ಬಿಬಿಎಂಪಿ ವೆಬ್ಸೈಟಿನಲ್ಲಿ ಪ್ರಕಟಿಸುವಂತೆ ಬಿಬಿಎಂಪಿ ಆಡಳಿತಧಿಕಾರಿ ವಿಜಯ್ಭಾಸ್ಕರ್ ಕೇಳಿಕೊಂಡಿದ್ದರು.
ಈ ಹಿನ್ನಲೆಯಲ್ಲಿ ನಾವು ನಗರದ ನಾನಾ ಭಾಗಗಳಲ್ಲಿ ನಡೆದಿರುವ ಆಕ್ರಮ ಕಾಮಗಾರಿಯನ್ನು ಬಯಲು ಮಾಡಿದ್ದೇವೆ. ಇದರ ಬಗ್ಗೆ ತಕ್ಷಣವೇ ಕ್ರಮ ಕೈಗೊಂಡು, ತಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.