ಬೆಂಗಳೂರು: ಕೇಂದ್ರ ಸರ್ಕಾರದ ಜೆ-ನರ್ಮ್ ಯೋಜನೆಯಡಿ ಮನೆ ನಿರ್ಮಿಸುತ್ತೇವೆ ಎಂದು ಹೇಳಿ ಇದ್ದ ಜಾಗವನ್ನು ಖಾಲಿ ಮಾಡಿಸಿ, 27 ಕುಟುಂಬಗಳನ್ನು ಬೀದಿಗೆ ತಳ್ಳಿದ್ದು, ಕುಟುಂಬಗಳಿಗೆ ನೆಲೆ ಕಾಣದೆ ಪರದಾಡುವ ಸ್ಥಿತಿ ಎದುರಾಗಿದೆ ಸ್ಲಂ ಮಕ್ಕಳ ಹಕ್ಕೊತ್ತಾಯ ಸಮಿತಿ ಆರೋಪಿಸಿದೆ.
ಕೇಂದ್ರ ಸರ್ಕಾರದ ಜೆ-ನರ್ಮ್ ಯೋಜನೆಯಡಿ 27 ಕುಟುಂಬಗಳನ್ನು ನಗರದ 180ನೇ ವಾರ್ಡ್ ನ ವಿಜಯ್ ಕಾಲೇಜು ಸ್ಲಂನಿಂದ ಯಾರಬ್ ನಗರಕ್ಕೆ ಕಳೆದ 2013 ಎಪ್ರಿಲ್ನಲ್ಲಿ ಸ್ಥಳಾಂತರಿಸಲಾಗಿದೆ. ನಿಯಮದ ಪ್ರಕಾರ ಅವರಿಗೆ 6 ತಿಂಗಳೊಳಗೆ ವಾಸ ಯೋಗ್ಯ ಮನೆ ನಿರ್ಮಿಸಕೊಡಬೇಕಿತ್ತು. ಆದರೆ ಇದುವರೆಗೆ ಗೃಹ ನಿರ್ಮಾಣ ಕಾರ್ಯವಾಗಿಲ್ಲ. ಈ ಕುಟುಂಬಗಳು ಯಾವುದೇ ಮೂಲಭೂತ ಸೌಲಭ್ಯಗಳಿಲ್ಲದೆ ಬದುಕುತ್ತಿವೆ ಸಮಿತಿಯ ಮುಖಂಡ ಐಶ್ವರ್ಯ ದಾಸ್ ಪಟ್ನಾಯಕ್ ಆರೋಪಿಸಿದ್ದಾರೆ.
27 ಕುಟುಂಬಗಳು ತಾತ್ಕಾಲಿಕ ಶೆಡ್ ಗಳಲ್ಲಿ ವಾಸಿಸುತ್ತಿವೆ. ಅಲ್ಲಿ ಹೆಂಗಸರು ಮತ್ತು ಮಕ್ಕಳು ಅಸುರಕ್ಷತೆಯಿಂದ ಬದುಕುತ್ತಿದ್ದಾರೆ. ಕೂಡಲೇ ಸರ್ಕಾರ ಇವರೆಲ್ಲರಿಗೂ ಸೂಕ್ತ ಮನೆ ನಿರ್ಮಿಸಿಕೊಡಬೇಕು ಎಂದು ಒತ್ತಾಯಿಸಿದ ಅವರು, ಈ ಎಲ್ಲಾ ಕುಟುಂಬಗಳಿಗೆ ಮನೆ ಕಟ್ಟಿಕೊಡಲು ಹಣಕಾಸು ಕೊರತೆಯ ಸಬೂಬು ಹೇಳುತ್ತಿದೆ. ಮಳೆಗಾಲದಲ್ಲಿ ಈ ಕುಟುಂಬಗಳ ಜೀವನ ದುಸ್ತರವಾಗಿದೆ. ಟೆಂಟ್ ಶೆಡ್ಗಳಲ್ಲಿ ನೀರು ತುಂಬಿಕೊಳ್ಳುವುದರಿಂದ ರಾತ್ರ ಪೂರ್ತಿ ಜಾಗರಣ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ಹೇಳಿದ್ದಾರೆ.
ಕಳೆದ ಮೇ ತಿಂಗಳಲ್ಲಿ ಬಿಬಿಎಂಪಿ 24 ಲಕ್ಷ ರೂ. ಗಳನ್ನು ಮನೆ ನಿರ್ಮಾಣಕ್ಕೆ ಬಿಡುಗಡೆ ಮಾಡಿದೆ. ಆದರೂ ಇನ್ನೂ ಹಲವು ಕುಟುಂಬಗಳು ಟೆಂಟ್ನಲ್ಲೇ ವಾಸಿಸುತ್ತಿವೆ. ಹೆಂಗಸರು ಬಯಲಿನಲ್ಲಿ ಸ್ನಾನ ಮಾಡಬೇಕಾದ ದುಃಸ್ಥಿತಿ ಮುಂದುವರಿದಿದೆ. ಮಕ್ಕಳಿಗೆ ಓದಲು ಸ್ಥಳ ಮತ್ತು ಉತ್ತಮ ಪರಿಸರ ಇಲ್ಲದೆ ಮಕ್ಕಳು ಶಾಲೆಗಳಿಗೆ ಬರುವುದನ್ನು ಬಿಡುತ್ತಿದ್ದಾರೆ .ಕಳೆದ ವರ್ಷ ನಾಲ್ಕು ವರ್ಷದ ಮಗು ಮದನ್ ದೊಡ್ಡ ಗುಂಡಿಗೆ ಬಿದ್ದು ಗಾಯಗೊಂಡಿದ್ದಾನೆ. ಇದುಕೂಡ ಬಿಬಿಎಂಪಿ ನಿರ್ಮಾಣ ಮಾಡುತ್ತಿರುವ ಮಿನಿ ಸ್ಟೇಡಿಯಂ ಜಾಗದಲ್ಲೇ ನಡೆದಿದೆ. ಸ್ಟೇಡಿಯಂ ಸುತ್ತ ಬೇಲಿ ಹಾಕುವಂತೆ ಒತ್ತಾಯಿಸಿದ್ದರೂ ಅದನ್ನು ಕಾರ್ಯರೂಪಕ್ಕೆ ತಂದಿಲ್ಲ ಎಂದು ಅವರು ಆಪಾದಿಸಿದ್ದಾರೆ.