ಬೆಂಗಳೂರು: ಪಕ್ಕದಲ್ಲಿನ ಖಾಲಿ ನಿವೇಶದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ಕಾರಣ ಭೂಮಿ ಕುಸಿದು 8 ಅಂತಸ್ತಿನ ಅಪಾರ್ಟ್‍ಮೆಂಟ್‍ನ ಇಡೀ ಕಟ್ಟಡ ಬಿರುಕು ಬಿಟ್ಟಿದೆ. ಅಪಾರ್ಟ್‍ಮೆಂಟ್‍ನ ಬಿಟ್ಟಿರುವ ಪರಿಣಾಮ ಅದು ಧರೆಗುರುಳುವ ಆತಂಕ ಎದುರಾಗಿದ್ದು, ಅಪಾರ್ಟ್‍ಮೆಂಟ್‍ನಲ್ಲಿದ್ದ 42 ಕುಟುಂಬಗಳು ಮನೆ ತ್ಯಜಿಸಿದ್ದು, ಈಗ ಬೀದಿಗೆ ಬಿದ್ದಿದ್ದಾರೆ.
ಕನ್ನಿಂಗ್‍ಹ್ಯಾಂ ರಸ್ತೆಯಲ್ಲಿರುವ `ಕ್ವೀನ್ಸ್ ಕಾರ್ನರ್' ಅಪಾರ್ಟ್‍ಮೆಂಟ್‍ನ ಸಿ ಬ್ಲಾಕ್ ಕಟ್ಟಡ ಸಂಪೂರ್ಣ ಬಿರುಕು ಬಿಟ್ಟಿದೆ. ಸದ್ಯ ಕಟ್ಟಡದಿಂದ ಹೊರಗುಳಿದಿರುವ ವಾಸಿಗಳು, ಎ ಮತ್ತು ಬಿ ಬ್ಲಾಕ್‍ನಲ್ಲಿ ಆಶ್ರಯ ಪಡೆದಿದ್ದಾರೆ. ವಸ್ತುಗಳೆಲ್ಲಾ ಮನೆಗಳಲ್ಲೇ ಉಳಿದಿದ್ದು, ಕಟ್ಟಡ ಯಾವಾಗ
ಬೀಳುತ್ತದೋ ಎಂಬ ಭಯದಲ್ಲಿದ್ದಾರೆ.
ಭೂಕಂಪದ ಅನುಭವ: ಸೋಮವಾರ ಬೆಳಗ್ಗೆ ಸುಮಾರು 11 ಗಂಟೆ ವೇಳೆಗೆ ಭೂಮಿ ಕುಸಿದು ಕಟ್ಟಡ ಅಲುಗಾಡಿದೆ. ಭೂಕಂಪದ ಅನುಭವವಾದ ಹಿನ್ನೆಲೆಯಲ್ಲಿ ಹೆದರಿದ ಜನ ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ. ನಂತರ ಈ ಸಂಬಂಧ ಬಿಬಿಎಂಪಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ ಬಿಬಿಎಂಪಿ ಅಧಿಕಾರಿಗಳು ಕಟ್ಟಡ ಬೀಳುವ ಸಾಧ್ಯತೆಯಿದ್ದು, ಯಾರೂ ಮನೆಯೋಳಗೆ ಹೋಗದಂತೆ ಎಚ್ಚರಿಕೆ ನೀಡಿದ್ದಾರೆ. ಹಾಗಾಗಿ ಅಧಿಕಾರಿಗಳ ಆದೇಶದಂತೆ ಅಪಾರ್ಟ್‍ಮೆಂಟ್‍ನ ಸಿ ಬ್ಲಾಕ್ ನಿವಾಸಿಗಳು ಮನೆಗಳಿಗೆ ವಾಪಸ್ಸಾಗಿಲ್ಲ. ಈಗ ಅವರನ್ನು ಕೇಳುವವರಿಲ್ಲ.
ನೀರಿನ ಗುಂಡಿ ಕಾರಣ?: ಈ ಬಗ್ಗೆ ಪ್ರತಿಕ್ರಿಯಿಸಿರುವ ಪಾಲಿಕೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಷರೀಫ್, ಅಪಾರ್ಟ್‍ಮೆಂಟ್ ಪಕ್ಕದಲ್ಲಿರುವ ನಿವೇಶನದಲ್ಲಿ ಲೆಗಸಿ ಬಿಲ್ಡರ್ಸ್ ಬಹುಮಹಡಿ ಕಟ್ಟಡ ನಿರ್ಮಾಣ ಕಾಮಗಾರಿ ನಡೆಸುತ್ತಿದ್ದು, ಪಾಯ ಹಾಕಲು 40 ಅಡಿ ಆಳದ ಗುಂಡಿ ತೆಗೆಯಲಾಗಿದೆ. ಅಲ್ಲಿ ನೀರು ತುಂಬಿದ್ದ ಕಾರಣ ಸುತ್ತಲ ಮಣ್ಣು ತೇವಗೊಂಡು ಘಟನೆ ಸಂಭವಿಸಿದೆ. ಅಲ್ಲದೆ ಅಪಾಟ್ರ್ ಮೆಂಟ್ ಪಕ್ಕದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ವಸತಿ ಗೃಹ ನಡುವೆ ಹಾಕಲಾಗಿದ್ದ 12 ಅಡಿ ಎತ್ತರದ ಗೋಡೆಯೂ ಕುಸಿದು ಬಿದ್ದಿದೆ. ಕಾಂಪೌಂಡ್ ಗೆ ಹೊಂದಿಕೊಂಡಿದ್ದ 3 ಬೃಹತ್ ಮರಗಳು ಉರುಳಿ ಬಿದ್ದಿವೆ. ಅಲ್ಲದೇ ಅಪಾಟ್ರ್ ಮೆಂಟ್ ಆವರಣದಲ್ಲಿ 8 ಅಡಿ ವಿಸ್ತೀರ್ಣದಲ್ಲಿ ಅಂದಾಜು 10ಕ್ಕೂ ಹೆಚ್ಚು ಆಳಕ್ಕೆ ಮಣ್ಣು ಕುಸಿದು ಬಿದ್ದಿದ್ದು, ಇದರಿಂದ ಅಪಾರ್ಟ್‍ಮೆಂಟ್‍ನ ಗೋಡೆಗಳು ಬಿರುಕು ಬಿಟ್ಟಿವೆ ಎಂದು ತಿಳಿಸಿದ್ದಾರೆ.
ಸಂಸ್ಥೆ ವಿರುದ್ಧ ಕಿಡಿ: ಕಾಮಗಾರಿ ನಡೆಸುತ್ತಿ ರುವ ಲೆಗಸಿ ಬಿಲ್ಡರ್ಸ್ ಸಂಸ್ಥೆ, ಅಕ್ಕಪಕ್ಕದ ಕಟ್ಟಡಕ್ಕೆ ಹಾನಿಯಾಗದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ. ಜಲಮಂಡಳಿ ಪೈಪ್ ನಿಂದ ಸೋರಿಕೆಯಾಗುತ್ತಿರುವ ನೀರು 2 ವರ್ಷಗಳಿಂದ ಹೀಗೇ ನಿಲ್ಲುತ್ತಿದೆ ಎಂದು ಅಪಾರ್ಟ್‍ಮೆಂಟ್ ನಿವಾಸಿಗಳು ಸಂಸ್ಥೆ ವಿರುದ್ಧ ಕಿಡಿಕಾರಿದ್ದಾರೆ.