ಬೆಂಗಳೂರು: ಕಬ್ಬು ಬೆಳೆಗಾರರ ಬಾಕಿ ಪಾವತಿಸದಿದ್ದರೆ ಜೂನ್ 29ರಿಂದ ನಿರಂತರ ಉಪವಾಸ ಸತ್ಯಾಗ್ರಹ ಆರಂಭಿಸಲಾಗುತ್ತದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘ ತೀರ್ಮಾನಿಸಿದೆ.
ಸಕ್ಕರೆ ಕಾರ್ಖಾನೆಗಳು ಬಾಕಿ ಉಳಿಸಿ ಕೊಂಡಿರುವ ಕಬ್ಬಿನ ಬಾಕಿ ಪಾವತಿಸಬೇಕು. ಇಲ್ಲದಿದ್ದರೆ ಬೆಳಗಾವಿ ಮತ್ತು ಬೆಂಗಳೂರಿನಲ್ಲಿ ಸರದಿ ಉಪವಾಸ ನಡೆಸಲಾಗುತ್ತದೆ ಎಂದು ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಬೆಳಗಾವಿಯ ಕಬ್ಬು ಬೆಳೆಗಾರ ಗುರುನಾಥ ಮಲ್ಲಪ್ಪ ಕಬ್ಬಿನ ಬಾಕಿ ಹಣ ಸಿಗದೆ ಆತ್ಮಹತ್ಯೆ ಮಾಡಿಕೊಂಡರೂ ಅವರ ಕುಟುಂಬಕ್ಕೆ ಸರ್ಕಾರ ಸಾಂತ್ವನ ಹೇಳುವ ಸೌಜನ್ಯ ತೋರಿಸಿಲ್ಲ. ಪ್ರತಿ ಬಾರಿಯೂ ಕಬ್ಬಿನ ಬಾಕಿ ಪಡೆಯಲು ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಅನಿವಾರ್ಯ ಉಂಟಾಗಿದೆ. ಈ ಬಾರಿ ಕೂಡ ಬೆಳಗಾವಿಯ ಕಬ್ಬು ಬೆಳೆಗಾರ ಗುರುನಾಥ ಮಲ್ಲಪ್ಪ ಆತ್ಮಹತ್ಯೆ ಮಾಡಿಕೊಂಡ ನಂತರವಷ್ಟೇ ಸರ್ಕಾರ ಜಾಗೃತವಾಗಿದೆ.
ಬಳಿಕ ಸಕ್ಕರೆ ಕಾರ್ಖಾನೆಗಳು ಬಾಕಿ ಪಾವತಿಯ ಮಾತನಾಡಿವೆ. ಇದೇ ಪರಿಸ್ಥಿತಿ ಮುಂದುವರಿದರೆ ರೈತರೇ ಸರ್ಕಾರಕ್ಕೆ ಪಾಠ ಕಲಿಸುತ್ತಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಮೃತ ರೈತ ಗುರುನಾಥ ಮಲ್ಲಪ್ಪ ಕುಟುಂಬಕ್ಕೆ ಸರ್ಕಾರ ಕೂಡಲೇ ರು.10ಲಕ್ಷ ಪರಿಹಾರ ನೀಡಬೇಕು. ಕಬ್ಬಿನ ಬಾಕಿ ಪಾವತಿಸದೆ ರೈತನ ಆತ್ಮಹತ್ಯೆಗೆ ಕಾರಣವಾದ ಮಲಪ್ರಭ ಸಕ್ಕರೆ ಕಾರ್ಖಾನೆ ಮಾಲೀಕ ಡಿ.ಬಿ. ಇನಾಂದಾರ್ ವಿರುದಟಛಿ ಕ್ರಿಮಿನಲ್ ಕೇಸು ದಾಖಲಿಸಬೇಕು ಎಂದು ಶಾಂತಕುಮಾರ್ ಆಗ್ರಹಿಸಿದರು.
ಕೇಂದ್ರ ಸರ್ಕಾರ ಸಕ್ಕರೆ ಕಾರ್ಖಾನೆಗಳಿಗೆ ರು.6000 ಕೋಟಿ ಸಾಲ ಒದಗಿಸಲು ಮುಂದಾಗಿದೆ. ಇದರಿಂದ ರಾಜ್ಯದ ಕಬ್ಬು ಬೆಳೆಗಾರರಿಗೆ ಯಾವುದೇ ಅನುಕೂಲವಾಗುವುದಿಲ್ಲ. ಏಕೆಂದರೆ, ಕೇಂದ್ರ ನೀಡುವ ನೆರವಿನಲ್ಲಿ ರಾಜ್ಯಕ್ಕೆ ರು.800ಕೋಟಿ ಸಿಗಬಹುದು. ಇದರಲ್ಲಿ ಪ್ರತಿ ಕಾರ್ಖಾನೆಗೂ ರು.15ಕೋಟಿ ಲಭಿಸಲಿದೆ. ಆದರೆ ಪ್ರತಿ ಕಾರ್ಖಾನೆಗಳು ರು.50ಕೋಟಿಗೂ ಹೆಚ್ಚಿನ ಬಾಕಿ ಉಳಿಸಿಕೊಂಡಿರುವುದರಿಂದ ರೈತರಿಗೆ ಸಿಗಬೇಕಾದ ಬಾಕಿಯಲ್ಲಿ ಕೇವಲ ರು.25,000 ಸಿಗಬಹುದು. ಆದ್ದರಿಂದ ಕೇಂದ್ರ ಸರ್ಕಾರ ನೀಡುತ್ತಿರುವ ಅನುದಾನವನ್ನು ಹೆಚ್ಚಿಸಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಒತ್ತಡಬೇಕು ಎಂದು ಅವರು ಆಗ್ರಹಿಸಿದರು.
ರಾಜ್ಯ ಸಕ್ಕರೆ ಸಚಿವ ಮಹಾದೇವ ಪ್ರಸಾದ್ ರೈತರಿಗೆ ಕಬ್ಬಿನ ಬಾಕಿ ಕೊಡಿಸುವುದರಲ್ಲಿ ಸಂಪೂರ್ಣ ವಿಫಲವಾಗಿದ್ದು, ಇದರಿಂದಾಗಿ ಹಿಂದಿನ ಬಾಕಿಯೂ ಸೇರಿ ಸುಮಾರು ರು.4600ಕೋಟಿಗಳಷ್ಟು ಏರಿಕೆಯಾಗಿದೆ. ಬಾಕಿ ಪಾವತಿಸದ ಕಾರ್ಖಾನೆಗಳ ವಿರುದ್ಧ ಕ್ರಮಕೈ ಗೊಳ್ಳಲು ಮುಂದಾಗದ ಸಚಿವರು ರೈತರ ಬೇಡಿಕೆಗಳನ್ನು ಸಂಪೂರ್ಣ ನಿರ್ಲಕ್ಷಿಸಿದ್ದಾರೆ. ಹೀಗಾಗಿ ಸರ್ಕಾರದ ವಿರುದ್ಧ 29ರಿಂದ ಬೆಳಗಾವಿಯಲ್ಲಿ ನಿರಂತರ ಉಪವಾಸ ಸತ್ಯಾಗ್ರಹ ನಡೆಸಲಾಗುತ್ತದೆ. ಇದಕ್ಕೆ ಸ್ಪಂದನೆ ಸಿಗದಿದ್ದರೆ, ಮತ್ತೆ ಬೆಂಗಳೂರಿನಲ್ಲೂ ಹೋರಾಟ ನಡೆಸಲಾಗುತ್ತದೆ ಎಂದು ಶಾಂತ ಕುಮಾರ್ ವಿವರಿಸಿದರು. ಸಂಘದ ಪದಾಧಿಕಾರಿಗಳಾದ ತೇಜಸ್ವಿ ಪಟೇಲ್, ಎನ್.ಎಚ್.ದೇವಕುಮಾರ್, ಎಸ್.ಎನ್.ಬಸವಣ್ಣನವರ್, ಜಗದೀಶ್ ಪಾಟೀಲ್, ರಮೇಶ್ ಹೂಗಾರ್ ಹಾಜರಿದ್ದರು.