ಬೆಂಗಳೂರು: ಅರ್ಕಾವತಿ ಡಿನೋಟಿಫಿಕೇಷನ್ ಪ್ರಕರಣದ ತನಿಖೆಗಾಗಿ ರಚಿಸಿರುವ ನ್ಯಾ.ಕೆಂಪಣ್ಣ ಆಯೋಗದ ವಿಚಾರಣೆಗುರುವಾರದಿಂದ ಆರಂಭಗೊಳ್ಳಲಿದೆ.
ಸರ್ಕಾರದ ಪರ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಎಸ್. ಪೊನ್ನಣ್ಣ ಮತ್ತು ವಿಶೇಷ ವಕೀಲ ವಿಜಯ್ ಕುಮಾರ್ ಎ. ಪಾಟೀಲ್ ಆಯೋಗದ ಮುಂದೆ ವಾದ ಮಂಡಿಸಲಿದ್ದಾರೆ. ಅರ್ಕಾವತಿ ಡಿನೋಟಿಫಿಕೇಷನ್ ಪ್ರಕರಣದ ವಾಸ್ತವ ದಾಖಲೆಗಳನ್ನು 2015ರ ಏ. 30ರಂದು ರಾಜ್ಯ ಸರ್ಕಾರ ನ್ಯಾ. ಕೆಂಪಣ್ಣ ಆಯೋಗಕ್ಕೆ ಸಲ್ಲಿಸಿತ್ತು. ಸಾವಿರಕ್ಕೂ ಹೆಚ್ಚು ಪುಟಗಳ ಸರ್ಕಾರಿ ದಾಖಲೆಗಳ ಮೂರು ಸಂಪುಟಗಳ ದಾಖಲೆ ಇದಾಗಿತ್ತು. ಗುರುವಾರದಿಂದ ಆರಂಭವಾಗುವ ವಿಚಾರಣೆ ಸರ್ಕಾರ ಸಲ್ಲಿಸಿರುವ ವರದಿ ಮತ್ತು ಡಿನೋಟಿಫಿಕೇಷನ್ ಸಂಬಂಧಿಸಿದಂತೆ ದಾಖಲಾಗಿರುವ 24 ಖಾಸಗಿ ದೂರುಗಳ ವಿಚಾರಣೆಯೂ ಆರಂಭವಾಗಲಿದೆ.
ಸಿದ್ದರಾಮಯ್ಯ ವಿರುದ್ಧ ಆರೋಪ
ಅರ್ಕಾವತಿ ಡಿನೋಟಿಫಿಕೇಷನ್ ಹಗರಣದ ಬಗ್ಗೆ ಬಿಜೆಪಿ ಕಳೆದ ಜುಲೈನಲ್ಲಿ ನಡೆದ ಅಧಿವೇಶನದಲ್ಲಿ ಪ್ರಸ್ತಾಪಿಸಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೀಡೂ ಹೆಸರಿನಲ್ಲಿ ಅಕ್ರಮವಾಗಿ ಡಿನೋಟಿಫೈ ಮಾಡಿದ್ದಾರೆ ಎಂದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಆರೋಪಿಸಿದ್ದರು. ಈ ಬಗ್ಗೆ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಿ ದಾಖಲೆ ನೀಡಿ 540 ಎಕರೆ ಅಕ್ರಮವಾಗಿ ಡಿನೋಟಿಫೈ ಮಾಡಿದ್ದಾರೆ ಎಂದು ದೂರಿದ್ದರು. ಈ ಬಗ್ಗೆ ಸಾಕಷ್ಟು ಆರೋಪ-ಪ್ರತ್ಯಾರೋಪಗಳು ನಡೆದು ಪ್ರಕರಣದ ತನಿಖೆಗಾಗಿ ನ್ಯಾ.ಕೆಂಪಣ್ಣ ಅಧ್ಯಕ್ಷತೆಯಲ್ಲಿ ಆಯೋಗ ರಚಿಸಲಾಗಿತ್ತು.ಈ ಆಯೋಗದ ಅವಧಿ ಆರು ತಿಂಗಳಾಗಿತ್ತಾದರೂ ಸರ್ಕಾರ ಅವಧಿ ವಿಸ್ತರಿಸಿದೆ. ಬಿಜೆಪಿ ವತಿಯಿಂದ `ಅರ್ಕಾವತಿ ಕರ್ಮಕಾಂಡದ ಸತ್ಯಶೋಧನಾ ವರದಿ'ಯನ್ನು ಬಿಡುಗಡೆ ಮಾಡಲಾಗಿತ್ತು.
ಜೆಡಿಎಸ್‍ನಿಂದ `ಅರ್ಕಾವತಿ ಕರ್ಮಕಾಂಡ' ಸಂಪುಟ ಬಿಡುಗಡೆ ಮಾಡಲಾಗಿತ್ತು. ಆದರೆ ಸರ್ಕಾರ ಆಯೋಗಕ್ಕೆ ಯಾವುದೇ ದಾಖಲೆ ನೀಡಿರಲಿಲ್ಲ. ಈಗ ಸರ್ಕಾರವೂ ದಾಖಲೆಗಳನ್ನು ಒದಗಿಸಿದೆ.