ಬೆಂಗಳೂರು: ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಕರ್ತವ್ಯ ನಿರ್ವಹಣೆ ವೇಳೆ ದುರ್ಘಟನೆ ಸಂಭವಿಸಿ ಮೃತಪಟ್ಟರೆ ಅವರ ಕುಟುಂಬಕ್ಕೆ ರು.30 ಲಕ್ಷ ಪರಿಹಾರ ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದರು.
ಬನ್ನೇರುಘಟ್ಟ ರಸ್ತೆ ಆರ್.ಎ. ಮುಂಡ್ಕೂರ್ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಅಕಾಡೆಮಿಯಲ್ಲಿ ಅಗ್ನಿಶಾಮಕ ಸೇವೆ, ಗೃಹರಕ್ಷಕ ದಳ ಹಾಗೂ ಪೌರ ರಕ್ಷಕ ದಳದ 88 ಸಿಬ್ಬಂದಿಗೆ 2014ನೇ ಸಾಲಿನ `ಮುಖ್ಯಮಂತ್ರಿ ಪದಕ' ವಿತರಿಸಿ ಅವರು ಮಾತನಾಡಿದರು. ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸರು ಕರ್ತವ್ಯ ನಿರ್ವಹಣೆ ವೇಳೆ ಮೃತಪಟ್ಟರೆ ರು.30 ಲಕ್ಷ ಪರಿಹಾರ ನೀಡಲಾಗುತ್ತಿದೆ. ಆದರೆ, ಅಗ್ನಿಶಾಮಕ ದಳ, ಗೃಹರಕ್ಷಕ ದಳದಲ್ಲಿ ರು.10 ಲಕ್ಷವಿತ್ತು. ಅದನ್ನು ರು.30 ಲಕ್ಷಕ್ಕೆ ಹೆಚ್ಚಿಸಲಾಗುತ್ತದೆ ಎಂದರು.
ಕ್ಯಾಂಟೀನ್ ಸೌಲಭ್ಯ: ಪೊಲೀಸ್ ಕ್ಯಾಂಟೀನ್ ಇಲಾಖೆ ಜತೆಗೆ ಅಗ್ನಿಶಾಮಕ ಸೇವೆ, ಗೃಹರಕ್ಷಕ, ಪೌರ ರಕ್ಷಣೆ ಸಿಬ್ಬಂದಿಗೂ ಕ್ಯಾಂಟೀನ್ ವ್ಯವಸ್ಥೆ ವಿಸ್ತರಿಸಲು ಸರ್ಕಾರ ಚಿಂತನೆ ನಡೆಸಿದೆ. ಬೆಂಗಳೂರನಲ್ಲಿ ಕರ್ತವ್ಯ ನಿರ್ವಹಿಸುವ ಗೃಹ ರಕ್ಷಕ ಸಿಬ್ಬಂದಿಗೆ ನೀಡಲಾಗುತ್ತಿರುವ ರು.300 ಭತ್ಯೆಯನ್ನು ರು.400ಕ್ಕೆ ಹಾಗೂ ರಾಜ್ಯದ ಬೇರೆ ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ರು.250ರಿಂದ ರು.325 ಹೆಚ್ಚಿಸಿ ಆದೇಶ ಹೊರಡಿಸಲಾಗಿದೆ. ರಜಾ ದಿನಗಳಲ್ಲಿ ಕಾರ್ಯ ನಿರ್ವಹಿಸಿದರೆ ನೀಡುತ್ತಿದ್ದ ಭತ್ಯೆಯನ್ನು ರು.200ರಿಂದ ರು.400 ರೂ.ಗೆ ಹೆಚ್ಚಳ ಮಾಡಲಾಗಿದೆ ಎಂದರು.
ಅಗ್ನಿಶಾಮಕ ಇಲಾಖೆ ಡಿಜಿಪಿ ಕಿಶೋರ್ ಚಂದ್ರ ಮಾತನಾಡಿ, ಜನ ಸಾಮಾನ್ಯರೂ ಕೂಡ ಜನಸೇವೆ ಹೇಗೆ ಮಾಡಬಹುದು ಎಂಬುದನ್ನು ಗೃಹ ರಕ್ಷಕದಳ ತೋರಿಸಿ ಕೊಟ್ಟಿದೆ. ಕಠಿಣ ಹಾಗೂ ಪ್ರತಿಕೂಲ ವಾತಾವರಣದಲ್ಲಿ ತುರ್ತು ಸೇವೆಯಲ್ಲಿ ಸಿಬ್ಬಂದಿ ಪ್ರಾಣಾಪಾಯ ಲೆಕ್ಕಿಸದೆ ರಕ್ಷಣಾ ಜವಾಬ್ದಾರಿ ನಿರ್ವಹಿಸುತ್ತಿದೆ.
ಕಳೆದ ವರ್ಷ 16,440 ಕರೆ ಸ್ವೀಕರಿಸಿ, 840 ಜನರ ಪ್ರಾಣ ರಕ್ಷಿಸಲಾಗಿದ್ದು ನೂರಾರು ಕೋಟಿ ಆಸ್ತಿ ರಕ್ಷಣೆ ಮಾಡಲಾಗಿದೆ ಎಂದರು. ದೂರದರ್ಶನ ವಾಹಿನಿಯಲ್ಲಿ ಪೌರ ರಕ್ಷಣಾದಳದ ಕುರಿತು ಕಾರ್ಯ ಕ್ರಮಗಳನ್ನು ಪ್ರಸಾರ ಮಾಡಿದ ನಾಡೋಜ ಡಾ. ಮಹೇಶ್ ಜೋಷಿ ಅವರಿಗೆ `ಆಫೀಸರ್ ಕಮಾಂಡಿಂಗ್' ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕರ್ತವ್ಯದ ವೇಳೆ ಮರಣ ಹೊಂದಿದ ರಾಜಾಜಿನಗರದ ಅಗ್ನಿಶಾಮಕ ಸಿಬ್ಬಂದಿ ಶಿವಕುಮಾರ್ ಕುಟುಂಬಕ್ಕೆ ಸಿಎಂ ಸಿದ್ದರಾಮಯ್ಯ ರು.10 ಲಕ್ಷ ರೂ. ಪರಿಹಾರದ ಚೆಕ್ ನೀಡಿದರು. ಸಚಿವ ಜಾರ್ಜ್, ಸಚಿವ ರಾಮ ಲಿಂಗಾರೆಡ್ಡಿ, ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಕೆ. ಪಟ್ನಾಯಕ್, ಗೃಹ ಇಲಾಖೆ ಸಲಹೆಗಾರ ಸಿ. ಕೆಂಪಯ್ಯ, ಡಿಜಿ, ಐಜಿಪಿ ಓಂಪ್ರಕಾಶ್ ಮುಂತಾದವರು ಭಾಗವಹಿಸಿದ್ದರು.