ಬೆಂಗಳೂರು: ಆಧುನಿಕ ಜೀವನಶೈಲಿಯಲ್ಲಿ ದೈನಂದಿನ ವ್ಯಾಯಾಮಕ್ಕೆ ಸಮಯ ಇಲ್ಲದೆ ಪರದಾಡುವಂತಹ ನಾಗರಿಕರ ಅನುಕೂಲಕ್ಕಾಗಿ ವೈದ್ಯ ಜಿ.ಮೋಹನ್ ಕುಮಾರ್ ಅವರು ಬರೆದಿರುವ ಫಿಸಿಯೋ ಚಿಕಿತ್ಸೆ ಕೃತಿಯನ್ನು ನಗರದ ಪ್ರೆಸ್ಕ್ಲಬ್ನಲ್ಲಿಂದು ಲೇಖಕಿ ಡಾ. ವಸುಂಧರಾ ಭೂಪತಿ ಬಿಡುಗಡೆ ಮಾಡಿದರು.
ಬಳಿಕ ಮಾತನಾಡಿದ ಅವರು, ದಿನನಿತ್ಯ ಜೀವನದಲ್ಲಿ ನಾವು ಬಳಕೆ ಮಾಡುವ ವಸ್ತುಗಳಲ್ಲಿ ರಾಸಾಯನಿಕ ಅಂಶಗಳಿಂದ ಕೂಡಿದ್ದು, ಇದು ಹಲವು ರೋಗಗಳಿಗೆ ಕಾರಣವಾಗುತ್ತಿವೆ. ಇದರಿಂದ ನಾವು ಔಷಧಿಗಳ ಮೊರೆ ಹೋಗುತ್ತೇವೆ. ಹೆಚ್ಚಿನ ಔಷಧಿ ಸೇವಿಸುವುದು ಕೂಡ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಹೇಳಿದರು.
ಜೀವನ ಶೈಲಿಯಲ್ಲಿನ ಬದಲಾವಣೆ, ಆಹಾರ ಪದ್ಧತಿಯಲ್ಲಿ ಉಂಟಾಗಿರುವ ಏರುಪೇರುಗಳು ಮಧುಮೇಹದಂತಹ ರೋಗಗಳಿಗೆ ಕಾರಣವಾಗುತ್ತಿದ್ದು, ನಿಯಮಿತ ಆಹಾರ, ದೈನಂದಿನ ವ್ಯಾಯಾಮ ಮಾಡುವುದು ಅಗತ್ಯವಿದೆ ಎಂದು ಹೇಳಿದರು.
ಈ ನಿಟ್ಟಿನಲ್ಲಿ ಮೋಹನ್ ಕುಮಾರ್ ಅವರು ಹೊರತಂದಿರುವ ಪುಸ್ತಕ ಪ್ರತಿಯೊಬ್ಬರಿಗೂ ಸಹಕಾರಿಯಾಗಲಿದೆ ಎಂದು ಹೇಳಿದರು.