ಜಿಲ್ಲಾ ಸುದ್ದಿ

ರವೀಂದ್ರ ಕಲಾಕ್ಷೇತ್ರ: ಅರೆಬರೆ ಕಳೆ,ನಾಳೆ ತೆರೆ

Sumana Upadhyaya

ಬೆಂಗಳೂರು: ಪ್ರತಿಷ್ಠಿತ ರಂಗಮಂದಿರವಾದ ರವೀಂದ್ರ ಕಲಾಕ್ಷೇತ್ರ ಪರಿಪೂರ್ಣ ನವೀಕರಣ ಕಾಣದೇ ನಾಳೆ(ಜೂನ್ 21)ರಂದು ಪುನಾರಂಭಗೊಳ್ಳುತ್ತಿದೆ. ಒಂದು ವರ್ಷದಿಂದ ನಡೆಯುತ್ತಿದ್ದ ವೇದಿಕೆ ಪರದೆ, ಪೇಂಟಿಂಗ್ ಸೇರಿದಂತೆ ಕೆಲವೇ ಕಾಮಗಾರಿಗಳು ನವೀಕರಣ ಕಂಡಿವೆ.

ಸುವರ್ಣ ಮಹೋತ್ಸವ ನೆನಪಿನಲ್ಲಿ ನವೀಕರಣ ಮಾಡಿ, ಹೈಟೆಕ್ ಸ್ಪರ್ಶ ನೀಡಲು ನಿರ್ಧರಿಸಲಾಗಿತ್ತು. ಕಳೆದ ನವೆಂಬರ್ ನಿಂದಲೇ ಕಾಮಗಾರಿ ಕೂಡ ಪ್ರಾರಂಭವಾಗಿತ್ತು. ರವೀಂದ್ರ ಕಲಾಕ್ಷೇತ್ರ ಸಾಂಸ್ಕೃತಿಕ ಮತ್ತು  ಸಾಹಿತ್ಯದ ಕಾರ್ಯಕ್ರಮಗಳಿಗೆ ಪ್ರಸಿದ್ಧ ವೇದಿಕೆಯಾಗಿದ್ದರೂ, ಧ್ವನಿ ಮತ್ತು ಬೆಳಕಿನ ವ್ಯವಸ್ಥೆಯಲ್ಲಿ ತೀವ್ರ ಸಮಸ್ಯೆ ಇತ್ತು. ಹೀಗಾಗಿ ಇಲಾಖೆ ಅಧಿಕಾರಿಗಳು ಸುಸಜ್ಜಿತ ಹಾಗೂ ಆಧುನಿಕ ತಂತ್ರಜ್ಞಾನಕ್ಕೆ ತಕ್ಕಂತೆ ಗುಣಮಟ್ಟದ ದನಿ ಮತ್ತು ಬೆಳಕು ವ್ಯವಸ್ಥೆ ಅಳವಡಿಸುವ ಉದ್ದೇಶದೊಂದಿಗೆ ನವೀಕರಣ ಮಾಡಲು ನಿರ್ಧರಿಸಿದರು.

ಈ ನವೀಕರಣ ಕಾಮಗಾರಿ ಎರಡು ತಿಂಗಳಲ್ಲಿ ಮುಗಿಯಬೇಕಿತ್ತು, ಆದರೆ ಕಳೆದ ನವೆಂಬರ್ ನಲ್ಲಿ ಆರಂಭವಾದ ಕಾಮಗಾರಿಗೆ ಏಳು ತಿಂಗಳು ಆಗಿದ್ದರೂ ಈ ಅವಧಿಯಲ್ಲಿ ಹೊಸ ಪರದೆ ಹಾಗೂ ಸೋರುತ್ತಿದ್ದ ಚಾವಣಿಯನ್ನು ಮಾತ್ರ ಸರಿಪಡಿಸಲಾಗಿದೆ. ಜೂನ್ 21ಕ್ಕೆ ಸಮಾರಂಭಗಳಿಗೆ ತೆರೆದುಕೊಳ್ಳಲಿರುವ ಕಲಾಕ್ಷೇತ್ರದಲ್ಲಿ ಇನ್ನೂ ಒಂದು ತಿಂಗಳಲ್ಲಿ ನೆಲಕ್ಕೆ ಮ್ಯಾಟ್ ಹಾಗೂ ಆಸನದ ನವೀಕರಣ ಕಾಮಗಾರಿ ನಡೆಯುತ್ತದೆ ಎನ್ನುತ್ತಾರೆ ಅಧಿಕಾರಿಗಳು.

ಜೂನ್ 21ಕ್ಕೆ ಪುನರಾರಂಭಗೊಳಿಸಲು ಸಮಾರಂಭ ನಿಗದಿಯಾಗಿದ್ದರೂ ಬಣ್ಣ ಹಚ್ಚುವುದು, ವೇದಿಕೆಗೆ ಪರದೆ ಹಾಕುವುದು ಸೇರಿದಂತೆ ಅನೇಕ ಅವಶ್ಯ ಕಾಮಗಾರಿಗಳು ಪೂರ್ಣಗೊಂಡಿಲ್ಲ. ಧ್ವನಿ ಮತ್ತು ಬೆಳಕಿನ ವ್ಯವಸ್ಥೆಯ ನವೀಕರಣವನ್ನೇ ಕೈ ಬಿಡಲಾಗಿದೆ. ಇನ್ನೂ 3ರಿಂದ 4 ತಿಂಗಳಲ್ಲಿ ಅದನ್ನು ರಿಪೇರಿ ಮಾಡಲಾಗುತ್ತದೆ ಎಂದಷ್ಟೇ ಅಧಿಕಾರಿಗಳು ತಿಳಿಸಿದ್ದಾರೆ. ಕೇವಲ ಸಣ್ಣಪುಟ್ಟ ರಿಪೇರಿಗಾಗಿ ಇಷ್ಟು ದಿನ ಕಲಾಕ್ಷೇತ್ರದ ಬಾಗಿಲನ್ನು ಇಷ್ಟು ಕಾಲ ಮುಚ್ಚಿದ್ದಕ್ಕೆ ಕಲಾವಿದರಲ್ಲಿ ಆಕ್ರೋಶ ವ್ಯಕ್ತವಾಗಿದೆ.

SCROLL FOR NEXT