ಬೆಂಗಳೂರು: ಸಾಹಿತಿಗಳನ್ನು ಹಾಗೂ ಕ್ರೈಸ್ತ ಧರ್ಮಾಧಿಕಾರಿಗಳನ್ನು ಏಕವಚನದಲ್ಲಿ ವಾಕ್ ಪ್ರಹಾರ ನಡೆಸಿದ ಸಾಮಾಜಿಕ ಕಾರ್ಯಕರ್ತ ಟಿ.ಜೆ ಅಬ್ರಹಾಂ ಅವರನ್ನು ಬಂಧಿಸುವಂತೆ ಸರ್ಕಾರ ಆದೇಶ ಹೊರಡಿಸಬೇಕು ಎಂದು ಅಖಿಲ ಕರ್ನಾಟಕ ಕಥೋಲಿಕ ಕ್ರೈಸ್ತರ ಕನ್ನಡ ಸಂಘ ಆಗ್ರಹಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ರಫಾಯಲ್ ರಾಜ್, ಕನ್ನಡ ಕ್ರೈಸ್ತರ ಹೋರಾಟವನ್ನು ಹತ್ತಿಕ್ಕುವ ಹುನ್ನಾರ ನಡೆಸಲಾಗುತ್ತಿದೆ. ಟಿ.ಜೆ ಅಬ್ರಹಾಂ ಅವರ ಕನ್ನಡ ಕ್ರೈಸ್ತ ವಿರೋಧವಾಗಿ ಮಾತುಗಳನ್ನಾಡುತ್ತಾ ಬರುತ್ತಿದ್ದು, ಇತ್ತೆಚೆಗಷ್ಟೇ ಹಿರಿಯ ಸಾಹಿತಿಗಳನ್ನು, ಕನ್ನಡ ಸಂಘಟನೆಗಳ ಮುಖಂಡರನ್ನು ಏಕವಚನದಲ್ಲಿ ಸಂಭೋಧಿಸಿದ್ದಾರೆ ಎಂದು ಕಿಡಿಕಾರಿದರು.
ಕರವೇ ರಾಜ್ಯಾಧ್ಯಕ್ಷ ಟಿ.ಎ ನಾರಾಯಣಗೌಡ ಅವರು ಕನ್ನಡ ಕ್ರೈಸ್ತರಿಂದ ಹಣ ಪಡೆದು ಮಾತನಾಡುತ್ತಿದ್ದಾರೆ ಎಂದು ಅಬ್ರಹಾಂ ಆರೋಪಿಸಿದ್ದಾರೆ. ಅವರ ಆರೋಪ ನಿಜವಾಗಿದ್ದರೇ, ಅಬ್ರಹಾಂ ಅವರು ಕೂಡಲೇ ಆರೋಪಕ್ಕೆ ಸಂಬಂಧ ಪಟ್ಟ ದಾಖಲೆಗಳನ್ನು ಬಹಿರಂಗಪಡಿಸಲಿ ಎಂದ ಅವರು, ಟಿಜೆ ಅಬ್ರಹಾಂ ಅವರು ಕೇರಳದವರಾಗಿದ್ದು, ಕನ್ನಡ ಕ್ರೈಸ್ತರನ್ನು ಹತ್ತಿಕ್ಕುವ ಹುನ್ನಾರ ನಡೆಸುತ್ತಿದ್ದಾರೆ ಎಂದು ದೂರಿದ್ದಾರೆ.
ಸರ್ಕಾರ ಎಲ್ಲಾ ಚರ್ಚಗಳಲ್ಲಿ ಪೂಜೆ ಕಾರ್ಯಕ್ರಮವನ್ನು ಕನ್ನಡದಲ್ಲೇ ಕಡ್ಡಾಯಗೊಳಿಸಬೇಕು ಹಾಗೂ ಕನ್ನಡದವರ ಬಗ್ಗೆ ಟೀಕಿಸಿದಂತ ಅಬ್ರಾಹ್ಯಂ ಬಂಧನಕ್ಕೆ ಆದೇಶಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.