ಬೆಂಗಳೂರು: ಸ್ವಚ್ಛ ಭಾರತ ಯೋಜನೆಗೆ ಕೇಂದ್ರ ಸರ್ಕಾರ ನೀಡುತ್ತಿರುವ ಅನುದಾನ ಪ್ರಮಾಣ ಸಾಲದು ಎಂದು ಪ್ರತಿಪಾದಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ನೈರ್ಮಲ್ಯ ಕಾರ್ಯಕ್ರಮಗಳ ಹೆಸರಿನಲ್ಲಿ ಕರಭಾರ ಹೆಚ್ಚಿಸಲು ಸಾಧ್ಯವಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ.
ಬೆಂಗಳೂರಿನಲ್ಲಿ ನಡೆದ ನೀತಿ ಆಯೋಗದ ಸ್ವಚ್ಛ ಭಾರತ ಅಭಿಯಾನ ಉಪಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಪ್ರಾಯೋಜಿತ ಯೋಜನೆಗಳಿಗಾಗಿ ರಾಜ್ಯಕ್ಕೆ ಬಿಡುಗಡೆಯಾಗುತ್ತಿರುವ ಅನುದಾನ ಪ್ರಮಾಣ ಕಡಿಮೆಯಾಗುತ್ತಿದೆ. ರಾಜ್ಯಕ್ಕೆ 2015 -16 ನೇ ಸಾಲಿನಲ್ಲಿ 1 ,772 ಕೋಟಿ ರೂಪಾಯಿ ಅನುದಾನ ಮಾತ್ರ ಲಭ್ಯವಾಗಿದೆ. ಪರಿಸ್ಥಿತಿ ಹೀಗಿರುವಾಗ ನಾವು ನೈರ್ಮಲ್ಯ ಯೋಜನೆಗಳಿಗಾಗಿ ಕಾರಭಾರ ಹೆಚ್ಚಿಸಲು ಸಾಧ್ಯವಿಲ್ಲ ಎಂಬ ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ರಾಜ್ಯವನ್ನು ಈಗಾಗಲೇ ಹೆಚ್ಚು ಕರವಿಧಿಸುವ ರಾಜ್ಯ ಎಂದು ಪರಿಗಣಿಸಲಾಗುತ್ತಿದೆ. ಹೀಗಾಗಿ ಮತ್ತಷ್ಟು ಕಾರಭಾರ ಹೆಚ್ಚಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಒಂದು ವೇಳೆ ತೆರಿಗೆ ಹೆಚ್ಚಳ ಮಾಡಿ ಸಂಗ್ರಹಿಸಿದರು ಅದು ಸ್ವಚ್ಛ ಭಾರತ ಯೋಜನೆಗೆ ಸಾಲುವುದಿಲ್ಲ. ಕೇಂದ್ರ ಸರ್ಕಾರ ಸ್ವಚ್ಛ ಭಾರತ ಮಿಷನ್ ಗೆ 955 .76 ಕೋಟಿ ಹಣವನ್ನು ವಿನಿಯೋಗಿಸುತ್ತಿದೆ. ಇದರಲ್ಲಿ ರಾಜ್ಯದ ಪಾಲು 238 .94 ಕೋಟಿ. ಆದರೆ ಇದರಲ್ಲಿ ಸಮೂಹ ಮತ್ತು ವಯಕ್ತಿಕ ಶೌಚಾಲಯಕ್ಕೆ ನೀಡುವ ಸಬ್ಸಿಡಿ ಹಣ ಸೇರಿಲ್ಲ. ಗ್ರಾಮೀಣ ಪ್ರದೇಶವನ್ನು ಒಳಗೊಂಡು ಯೋಜನೆಯನ್ನು ವಿಸ್ತರಿಸುತ್ತಾ ಹೋದಂತೆ ಯೋಜನಾ ವೆಚ್ಚ 2 ,174 ಕೋಟಿಯಷ್ಟಾಗುತ್ತದೆ. ಎಂದು ಅವರು ಅಭಿಪ್ರಾಯಪಟ್ಟರು.
ಒಳಚರಂಡಿ ವ್ಯವಸ್ಥೆ ಸುಧಾರಣೆಯನ್ನು ಈ ಯೋಜನಾ ವ್ಯಾಪ್ತಿಯೊಳಗೆ ಕೇಂದ್ರ ಸರ್ಕಾರ ಸೇರಿಸಬೇಕಿದೆ. ನಜ್ಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಒಳಚರಂಡಿ ವ್ಯವಸ್ಥೆ ಸುಧಾರಣೆಗೆ ೬೦೦ ಕೋಟಿ ರೂಪಾಯಿ ಕೋಟಿ ಅಗತ್ಯ. ಜತೆಗೆ ಯೋಜನೆ ಅಗತ್ಯವಾದ ಹಣವನ್ನು 14 ನೇ ಹಣಕಾಸು ಆಯೋಗದ ಮೂಲಕ ರಾಜ್ಯ ಸರ್ಕಾರಗಳಿಗೆ ಲಭಿಸುವ ಅನುದಾನದಲ್ಲಿ ಭರಿಸಬೇಕೆಂಬ ಕೇಂದ್ರ ಸರ್ಕಾರದ ವಾದವೂ ಸಾಧುವಲ್ಲ ಎಂದು ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸ್ವಚ್ಛ ಭಾರತ ಯೋಜನೆ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಎಲ್ಲಾ ರಾಜ್ಯಗಳು ಸಕಾಲದಲ್ಲಿ ಉದ್ದೇಶಿತ ಗುರಿ ಸಾಧಿಸಬೇಕು, ಇದರಲ್ಲಿ ಕೆಂದ್ರ ಸರ್ಕಾರದ ಜವಾಬ್ದಾರಿಯೂ ಹೆಚ್ಚಿದ್ದು ಅನುದಾನ ಪ್ರಮಾಣವನ್ನು ಹೆಚ್ಚಿಸಲೇಬೇಕು ಎಂದು ಸಿ.ಎಂ ಒತ್ತಾಯಿಸಿದ್ದಾರೆ.