ಮೈಸೂರು: ಮೈಸೂರಿನ ಜಯ ಚಾಮರಾಜೇಂದ್ರ ಮೃಗಾಲಯದಲ್ಲಿ ಪ್ರವಾಸಿಗರ ಆಕರ್ಷಣೆಯಾಗಿದ್ದ ಹೆಣ್ಣು ಚಿಂಪಾಂಜಿ ಮಿರೆಲ್ಲಾ ಸೋಮವಾರ ಅಸುನೀಗಿದೆ.
ಆರೋಗ್ಯವಾಗಿಯೇ ಇದ್ದ 26 ವರ್ಷದ ಮಿರೆಲ್ಲಾ ಭಾನುವಾರ ರಾತ್ರಿ ಆಹಾರ ಸೇವಿಸಿರಲಿಲ್ಲ. ಸೋಮವಾರ ಬೆಳಗ್ಗೆ 10 ಗಂಟೆ ವೇಳೆಗೆ ಮಿರೆಲ್ಲಾ ಸಾವನ್ನಪ್ಪಿದೆ. ಚಿಂಪಾಂಜಿ ಸಾವಿಗೆ ಕಾರಣ ಏನು ಎಂದು ತಿಳಿದು ಬಂದಿಲ್ಲ ಎಂದು ಮೃಗಾಲಯದ ಕಾರ್ಯ ನಿರ್ವಾಹಕ ನಿರ್ದೇಶ ಕ ಬಿ.ಪಿ ರವಿ ತಿಳಿಸಿದ್ದಾರೆ.
ಮೃಗಾಲಯದಲ್ಲಿ ಮೊಸೀನ್, ಕಿಮೋನಿ, ನಿಕೋಸಿ, ಗುರು, ಗಂಗಾ, ಮಿರೆಲ್ಲಾ ಸೇರಿ ಒಟ್ಟು ಆರು ಚಿಂಪಾಂಜಿಗಳಿದ್ದವು. ಮಿರೆಲ್ಲಾ ದೇಹದ ಕೆಲ ಮಾದರಿಗಳನ್ನು ಹಿಸ್ಟೋಪೆಥಾ ಲಾಜಿಕಲ್ ಪರೀಕ್ಷೆಗಾಗಿ ಬೆಂಗಳೂರಿನ ಐಎಎಚ್ ಅಂಡ್ ಹಾಗೂ ಪಶುವೈದ್ಯ ಕಾಲೇಜಿಗೆ ಕಳುಹಿಸಲಾಗಿದೆ. ಸಾಮಾನ್ಯವಾಗಿ ಚಿಂಪಾಂಜಿಗಳ ಜೀವಿತಾವಧಿ 50 ವರ್ಷ ಇರುತ್ತದೆ. ಆದರೆ ಮೃಗಾಲಯದ ವಾತಾವರಣದಲ್ಲಿ ಅವು 35 ರಿಂದ 40 ವರ್ಷ ಬದುಕುತ್ತವೆ. ಆದರೆ ಮಿರೆಲ್ಲಾ 26 ವರ್ಷಕ್ಕೆ ಸಾವನ್ನಪ್ಪಿದೆ.
ಸ್ವೀಡನ್ ನಲ್ಲಿ ಜನಿಸಿದ ಮಿರೆಲ್ಲಾ ಮೈಸೂರಿಗೆ ಬಂದಾಗ ಕೇವಲ ಒಂದು ವರ್ಷ. ಮೃಗಾಲಯಗಳ ಪ್ರಾಣಿ ವಿನಿನಿಮಯ ಯೋಜನೆಯಡಿ ಸ್ವೀಡನ್ ನ ಕೋಲ್ ಮಾರ್ಡೆನ್ ವನ್ಯಜೀವಿ ಧಾಮಕ್ಕೆ 1994 ರಲ್ಲಿ ಒಂದು ಭಾರತೀಯ ಆನೆಯನ್ನು ಕೊಟ್ಟು 5 ಚಿಂಪಾಂಜಿಗಳನ್ನು ತರಲಾಗಿತ್ತು. ಈ ಪೈಕಿ 2 ಚಿಂಪಾಂಜಿಗಳು ಮಾತ್ರ ಬದುಕುಳಿದಿವೆ.