ಬೆಂಗಳೂರು- ಮಂಗಳೂರು ಮಾರ್ಗಕ್ಕೆ ವ್ಯವಸ್ಥಿತವಾದ ರಸ್ತೆ ಮತ್ತು ರೈಲು ಸಾರಿಗೆ ಸೌಲಭ್ಯ ಕಲ್ಪಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಬೆಂಗಳೂರು- ಮಂಗಳೂರಿನ ಮಾರ್ಗದಲ್ಲಿನ ರಸ್ತೆ ಸಾರಿಗೆ ಹಾಗೂ ರೈಲಿನ ವ್ಯವಸ್ಥೆ ಅಸಮರ್ಪಕವಾಗಿರುವುದಾಗಿ ಲತಾ ರಮೇಶ್ ಮತ್ತು ಪ್ರದೀಪ್‍ಕುಮಾರ ಕಲ್ಕೂರ ಎಂಬುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದರು. ವಿಚಾರಣೆ ನಡೆಸಿದ ಹಿರಿಯ ನ್ಯಾಯಮೂರ್ತಿ ಕೆ.ಎಲ್. ಮಂಜುನಾಥ್ ಮತ್ತು ನ್ಯಾ.ಪಿ.ಬಿ.ಭಜಂತ್ರಿ ಅವರಿದ್ದ ವಿಭಾಗೀಯ ಪೀಠ, ನೈರುತ್ಯ ರೈಲ್ವೆ ಇಲಾಖೆ ಹಾಗೂ ಮಂಗಳೂರು ಜಿಲ್ಲಾ„ಕಾರಿಗೂ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿದೆ.
ವಿವಾದವೇನು?: ಬೆಂಗಳೂರಿನಿಂದ ಮಂಗಳೂರಿಗೆ 350 ಕಿ.ಮೀ ಅಂತರವಿದೆ. ಆರು ರಸ್ತೆ ಮಾರ್ಗಗಳಿದ್ದು, ಅದರಲ್ಲಿ ಒಂದು ರಸ್ತೆಯನ್ನು ಶಾಶ್ವತವಾಗಿ ಮುಚ್ಚಲಾಗಿದೆ. ಮಂಗಳೂರು ಜಿಲ್ಲಾಧಿಕಾರಿಗಳು ಕೆಲ ರಸ್ತೆಗಳಲ್ಲಿನ ಸಂಚಾರ ನಿರ್ಬಂಧಿಸಿದ್ದಾರೆ. ಇನ್ನೊಂದೆಡೆ ಕಳೆದ ಕೇಂದ್ರ ರೈಲ್ವೆ ಬಜೆಟ್‍ನಲ್ಲಿ , ಬೆಂಗಳೂರು-ಮಂಗಳೂರಿಗೆ 2 ರೈಲುಗಳು ಸಂಚರಿಸಲಿದ್ದು, ಮತ್ತೊಂದು ಹೊಸ ರೈಲು ಸಂಚಾರ ಮಾಡುವುದಾಗಿ ಘೋಷಿಸಲಾಗಿತ್ತು. ಆದರೆ, ಈವರೆಗೂ ಹೊಸ ರೈಲು ಸಂಚಾರ ಆರಂಭವಾಗಿಲ್ಲ. ಬದಲಾಗಿ ಬೆಂಗಳೂರಿನಿಂದ ಮಂಗಳೂರಿಗೆ ಕೇವಲ ಒಂದು ಎಕ್ಸ್‍ಪ್ರೆಸ್ ರೈಲು ಸಂಚರಿಸುತ್ತಿದೆ.
ಅಲ್ಲದೆ, ರಸ್ತೆ ಮಾರ್ಗದಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ 6ರಿಂದ 7 ಗಂಟೆಗಳ ಕಾಲ ಪ್ರಯಾಣಿಸಬೇಕಾಗುತ್ತದೆ. ಆದರೆ, ರಸ್ತೆಗಳ ನಿರ್ಬಂಧದಿಂದ ಹೆಚ್ಚು ಗಂಟೆ ತಗುಲುತ್ತಿವೆ. ರೈಲಿನ ಪ್ರಯಾಣ ಬಳಸಿದ್ದಲ್ಲಿ 12 ಗಂಟೆಗೂ ಹೆಚ್ಚು ಸಮಯ ಹಿಡಿಯುತ್ತದೆ. ಹೀಗಾಗಿ, ರಸ್ತೆ ಮತ್ತು ರೈಲು ಸಾರಿಗೆ ವ್ಯವಸ್ಥೆಯನ್ನು ಅಭಿವೃದ್ಧಿ ಮಾಡಬೇಕು. ಅದಕ್ಕಾಗಿ ಈಗಿರುವ ಬಸ್ ಮತ್ತು ರೈಲುಗಳ ಸಂಖ್ಯೆ ಹೆಚ್ಚಿಸಬೇಕು. ರಸ್ತೆ ಮಾರ್ಗದಲ್ಲಿ ಶೌಚಾಲಯ ವ್ಯವಸ್ಥೆ ಕಲ್ಪಿಸಬೇಕು. ಈ ಸಂಬಂಧ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.