ಬೆಂಗಳೂರು: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಚಿಕಿತ್ಸೆ ಪಡೆಯುತ್ತಿರುವ ಚಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡು ಕೂಲಿ ಕಾರ್ಮಿಕರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಚಿಕ್ಕಮಗಳೂರು ಮೂಲದ ರವಿ(36) ಮೃತರು. ಕೌಟುಂಬಿಕ ಕಲಹ ಕಾರಣಗಳಿಂದ ಚಿಕ್ಕ ಬಿದರಕಲ್ಲಿನಲ್ಲಿ ವಾಸವಿರುವ ಸಂಬಂಧಿ ಶಿವಣ್ಣ ಎಂಬುವರ ಮನೆಗೆ ವಾರದ ಹಿಂದಷ್ಟೇ ರವಿ ಆಗಮಿಸಿದ್ದರು. ಶಿವಣ್ಣ ಅವರು ಬಾರ್ ಬೆಂಡಿಂಗ್ ಕೆಲಸ ಮಾಡುತ್ತಿದ್ದು, ರವಿಗೆ ಜಿಂದಾಲ್‌ನಲ್ಲಿಯೇ ಕೆಲಸಕೊಡಿಸಿದ್ದರು.
ಬುಧವಾರ ಎಂದಿನಂತೆ ಇಬ್ಬರೂ ಕೆಲಸಕ್ಕೆ ತೆರಳಿದ್ದರು. ಸಂಜೆ ಕೆಲಸ ಮುಗಿಸಿಕೊಂಡು ಶಿವಣ್ಣ ಮನೆಗೆ ಹೋಗಿದ್ದು, ರವಿ ಬಂದಿರಲಿಲ್ಲ. ಬೇಸರದಲ್ಲಿದ್ದ ಕಾರಣ ಮನೆಗೆ ಬರಬಹುದು ಎಂದು ಸುಮ್ಮನಾಗಿದ್ದೆ. ಆದರೆ, ಗುರುವಾರ ಬೆಳಗ್ಗೆ ಪೊಲೀಸರು ತಿಳಿಸಿದ ನಂತರವೇ ರವಿ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ ಎಂದು ಶಿವಣ್ಣ ಪೊಲೀಸರಿಗೆ ತಿಳಿಸಿದ್ದಾರೆ. ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.