ಜಿಲ್ಲಾ ಸುದ್ದಿ

ಗಂಡಿನ ವಿಕೃತ ಮನಸ್ಸಿಗೆ ನಿರ್ಲಕ್ಷ್ಯವೂ ಕಾರಣ

ಬೆಂಗಳೂರು: ಅತ್ಯಾಚಾರ ಎಸಗುವಂತಹ ಗಂಡಿನ ವಿಕೃತ ಮನಸ್ಸಿಗೆ ಸಮಾಜದ ದೋಷಗಳು ಎಷ್ಟು ಕಾರಣವೋ, ಆತನ ಪೋಷಕರ ನಿರ್ಲಕ್ಷ್ಯವೂ ಅಷ್ಟೇ ಕಾರಣವಾಗಿದೆ ಎಂದು ಮಾಜಿ ಸಚಿವೆ ಹಾಗೂ ಹಟ್ಟಿ ಚಿನ್ನದ  ಗಣಿ ಅಧ್ಯಕ್ಷೆ ರಾಣಿ ಸತೀಶ್ ಹೇಳಿದರು.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಸ್ತ್ರೀ ಜಾಗೃತಿ ಸಂಘಟನೆಯು ಭಾನುವಾರ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಆಯೋಜಿಸಿದ್ದ `ಹದಿಹರೆಯದ
ಸಮಸ್ಯೆಗಳಲ್ಲಿ ಸಿಲುಕಿರುವ ಮಕ್ಕಳು ಎಷ್ಟು ಸುರಕ್ಷಿತ?' ವಿಷಯ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಪ್ರಸ್ತುತ ಅತ್ಯಾಚಾರದ ಪ್ರಕರಣಗಳು ಸಾಂಕ್ರಾಮಿಕ ರೋಗದಂತೆ ಹರಡುತ್ತಿವೆ. ಚರ್ಚೆ, ವಿರೋಧಗಳು ಹೆಚ್ಚಾದಂತೆ ಈ ಪ್ರಕರಣಗಳು ಜಾಸ್ತಿಯಾಗುತ್ತಿರುವುದು ಅತ್ಯಂತ ಆಘಾತಕಾರಿ ಸಂಗತಿ. ಈ ವಿಕೃತ- ವಿಕಾರಕ್ಕೆ ಕೊನೆ ಇಲ್ಲವೇ ಎಂದು ಅವರು ನೊಂದು ನುಡಿದರು. ತಾಯಿಯಾದವಳು ಮನೆಯ ಆಡಳಿತದ ಜತೆ, ಮಕ್ಕಳನ್ನು ಸುಸಂಸ್ಕೃತವಾಗಿ ಬೆಳೆಸಲು ಶ್ರಮಿಸಿದರೆ, ತಂದೆಯಾದವರು ಮಕ್ಕಳ ಚಲನವಲನಗಳ ಮೇಲೆ ನಿಗಾ ಇಟ್ಟಿರಬೇಕು.

ಹೀಗೆ ಇಬ್ಬರೂ ಸೇರಿ ಮಕ್ಕಳನ್ನು ಸರಿದಾರಿಯಲ್ಲಿ ನಡೆಸಿದರೆ, ಸಮಾಜದಲ್ಲಿ ಅತ್ಯಾಚಾರದಂತಹ ಪ್ರಕರಣಗಳು ನಡೆಯಲು ಸಾಧ್ಯವೇ ಇಲ್ಲ ಎಂದು ಅಭಿಪ್ರಾಯ
ಪಟ್ಟರು. ಸರ್ಕಾರದ ಮಹಿಳಾ ಕಾರ್ಯ ಕ್ರಮಗಳ ವೈಫಲ್ಯದ ವಿರುದ್ಧ ಅವರು ಕಿಡಿಕಾರಿದರು. ಉಪಲೋಕಾಯುಕ್ತ ನ್ಯಾಯ ಮೂರ್ತಿ ಎಸ್.ಬಿ. ಮಜಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಹಿಳೆಯರು ಪುರುಷರಿಗಿಂತ ಕಡಿಮೆ ಇಲ್ಲ ಎನ್ನುವುದನ್ನು ಈಗಾಗಲೇ ಸಾಬೀತು ಮಾಡಿದ್ದಾರೆ.

ಯಶಸ್ಸಿನ ಪ್ರತಿ ಪುರುಷನ ಹಿಂದೆ ಮಹಿಳೆ ಇದ್ದಾಳೆ. ಮಹಿಳೆಯರ ಸಹಕಾರ ದಿಂದಲೇ ಪುರುಷರು ಮುಂದೆ ಬಂದಿದ್ದಾರೆ. ಹೀಗಾಗಿ ಮೇಲು-ಕೀಳು ಎನ್ನದೆ ಇಬ್ಬರೂ ಪೂರಕವಾಗಿ ದುಡಿಯ ಬೇಕಿದೆ. ಸ್ವಾರ್ಥ ಮನೋಭಾವ ದೂರವಾಗಬೇಕಿದೆ ಎಂದರು. ಇದೇ ವೇಳೆ, ಹಿರಿಯ ಮಹಿಳಾ ಸಾಧಕಿಯರಾದ ಬಿ.ಎಸ್.ಶಾಂತಾ ಬಾಯಿ ಹಾಗೂ ಇಂದು ರಮೇಶ್ ಅವರಿಗೆ ಸ್ತ್ರೀ ಜಾಗೃತಿ ಸಂಘಟನೆಯು 2015 ನೇ ಸಾಲಿನ ಎಸ್.ಜಿ. ಸುಶೀಲಮ್ಮ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿತು. ಸ್ತ್ರೀಜಾಗೃತಿ ಮಾಸ ಪತ್ರಿಕೆ ಸಂಪಾದಕಿ ಶೋಭಾ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೃತ್ತ ನ್ಯಾಯಾಧೀಶ ಎಸ್.ಎನ್. ಕೆಂಪಗೌಡರ್, ಮಾಹಿತಿ ತಂತ್ರಜ್ಞಾನ ಸಂಸ್ಥೆಯ ವಿ.ಎಸ್. ಪ್ರಕಾಶ್ ವೇದಿಕೆಯಲ್ಲಿದ್ದರು. ಸುಮಂಗಲಿ ಸೇವಾಶ್ರಮದ ಅಧ್ಯಕ್ಷೆ ಸುಶೀಲಮ್ಮ ಅಧ್ಯಕ್ಷತೆ ವಹಿಸಿದ್ದರು.

SCROLL FOR NEXT