ಗಂಗಾವತಿ: ವಿದೇಶಿ ಮಹಿಳೆಯೊಳಡನೆ ಅಸಭ್ಯವಾಗಿ ವರ್ತಿಸಿರುವ ನಾಲ್ವರು ಪೊಲೀಸ್ ಪೇದೆ ಹಾಗೂ ಇಬ್ಬರು ಹೋಮ್ ಗಾರ್ಡ್‌ಗಳನ್ನು ಸೋಮವಾರ ಅಮಾನತುಗೊಳಿಸಲಾಗಿದೆ.
ವಿದೇಶಿ ಮಹಿಳೆಯೊಡನೆ ಅಸಭ್ಯವಾಗಿ ವರ್ತಿಸಿದ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜಾ ಅವರು ಇಂದು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಗಂಗಾವತಿ ನಗರ ಠಾಣೆ ಪೇದೆಗಳಾದ ಅಮೃತ್, ರಾಜೇಶ್ ಗೌಳಿ, ಗ್ರಾಮಾಂತರ ಠಾಣೆಯ ಪೇದೆಗಳಾದ ಆದೇಶ್, ರೇವಪ್ಪ ಹಾಗೂ ಹೋಮ್ ಗಾರ್ಡ್ ಗಳಾದ ಶಿವು, ವೆಂಕಪ್ಪ ಅವರನ್ನು ಅಮಾನತುಗೊಳಿಸಲಾಗಿದೆ.
ವಿದೇಶಿ ಮಹಿಳೆ ಗಂಗಾವತಿಯಲ್ಲಿರುವ ವಿರೂಪಾಪುರ ಗುಡ್ಡೆಯಲ್ಲಿ ಹೋಳಿ ಹಬ್ಬವನ್ನು ಆಚರಿಸುತ್ತಿದ್ದ ವೇಳೆ ಆಕೆಯೊಂದಿಗೆ ಆ ಎಲ್ಲಾ ಪೇದೆಗಳು ಅಸಭ್ಯವಾಗಿ ವರ್ತಿಸಿದ್ದರು. ಈ ಹಿನ್ನೆಲೆಯಲ್ಲಿ ಮಹಿಳೆ ಗಂಗಾವತಿ ಪೊಲೀಸ್ ಠಾಣೆಯಲ್ಲಿ ಮೌಖಿಕ ದೂರು ದಾಖಲಿಸಿದ್ದರು.
ಅಲ್ಲದೆ ಎಸ್ಪಿ ಅವರ ಗಮನಕ್ಕೂ ತಂದಿದ್ದರು. ಪರಿಣಾಮ ಕೂಡಲೇ ಕ್ರಮ ಕೈಗೊಂಡಿರುವ ವರಿಷ್ಠಾಧಿಕಾರಿಗಳು, ಆರೋಪಿ ನೌಕರರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.