ಬೆಂಗಳೂರು: ಮಾಧ್ಯಮದ ಪ್ರತಿನಿಧಿಗಳು, ವಕೀಲರು ಮತ್ತು ಪೊಲೀಸರ ಮಧ್ಯೆ 2012ರಲ್ಲಿ ಸಿಟಿ ಸಿವಿಲ್ ಕೋರ್ಟ್‍ನಲ್ಲಿ ನಡೆದ ಸಂಘರ್ಷಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪರವಾಗಿ ವಕಾಲತ್ತು ವಹಿಸಿದ ಹಿರಿಯ ವಕೀಲ ಅಸ್ಮತ್ ಪಾಷ ಅವರನ್ನು ಕೆಲವರು ತುಚ್ಛವಾಗಿ ಕಂಡ ಹಿನ್ನೆಲೆಯಲ್ಲಿ ಹೈಕೋರ್ಟ್ ಕಿಡಿಕಾರಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿ ರವಿಕಾಂತೇ ಗೌಡ ಹಾಗೂ ಜಿ.ಆರ್.ರಮೇಶ್ ಅವರ ಪರವಾಗಿ ಅಸ್ಮತ್ ಪಾಷ ವಕಾಲತ್ತು ವಹಿಸಿದ್ದರು. ಈ ಹಿನ್ನೆಲೆಯಲ್ಲಿ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ಅವರ ವಿರುದ್ಧ ಅವಹೇಳನಕಾರಿ ಪ್ರಕಟಣೆ ಹಾಗೂ ಸಂದೇಶಗಳನ್ನು ಬಿತ್ತರಿಸಲಾಗಿತ್ತು. `ವಕೀಲರ ಪಾಲಿಗೆ ಅಸ್ಮತ್ ಪಾಷಾ ಇನ್ನಿಲ್ಲ ಹಾಗೂ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ' ಎಂಬ ಸಂದೇಶಗಳನ್ನು ಬರೆಯಲಾಗಿತ್ತು. ಈ ಅವಹೇಳನಕಾರಿ ಸಂದೇಶದ ಪೋಸ್ಟರ್‍ಗಳನ್ನು ನಗರದ ಸಿಟಿ ಸಿವಿಲ್ ಕೋರ್ಟ್‍ನ ಆವರಣದ ಗೋಡೆಗಳ ಮೇಲೆ ಕಳೆದ ತಿಂಗಳ 23ರಂದು ಅಂಟಿಸಲಾಗಿತ್ತು.
ಸೋಮವಾರ ವಿಚಾರಣೆ ವೇಳೆ ಈ ವಿಷಯ ತಿಳಿದ ನ್ಯಾ.ಎ.ಎನ್.ವೇಣುಗೋಪಾಲ್ ಗೌಡ ಅವರಿದ್ದ ಪೀಠ, ಈ ಕೆಲಸ ಮಾಡಿದವರು ಯಾರು? ಅಸ್ಮತ್ ಪಾಷಾ ಅವರ ಭಾವಚಿತ್ರಕ್ಕೆ ಶ್ರದ್ಧಾಂಜಲಿ ಅರ್ಪಿಸಿ ಹೂವಿನ ಹಾರ ಹಾಕಿ ಕೆಟ್ಟ ರೀತಿಯಲ್ಲಿ ವರ್ತಿಸಿದ್ದಾರೆ . ಇದು ನಿಜಕ್ಕೂ ಕ್ಷೋಭೆ ತರುವಂಥದ್ದಲ್ಲ. ವಕೀಲ ವೃತ್ತಿ ಎಂಬುದು ಗೌರವದ ವೃತ್ತಿ. ಒಂದು ವ್ಯವಸ್ಥೆಯಲ್ಲಿ ಮಾಧ್ಯಮ, ಕೋರ್ಟ್ ಹಾಗೂ ವಕೀಲರು ಅತ್ಯವಶ್ಯಕ. ವಕೀಲರೇ ಈ ಕೆಲಸ ಮಾಡಿದ್ದರೆ ಈ ವೃತ್ತಿಯನ್ನು ತ್ಯಜಿಸಿ ಬೇರಾವುದಾದರೂ ವೃತ್ತಿಯನ್ನು ಅರಸುವುದು ಲೇಸು. ಈ ರೀತಿಯಾಗಿ ವರ್ತಿಸಿ ವೃತ್ತಿಗೆ ಕೆಟ್ಟ ಹೆಸರು ತರುವ ಪ್ರಯತ್ನ ಮಾಡಬೇಡಿ ಎಂದು ಪೀಠ ವಕೀಲ ಸಮೂಹಕ್ಕೆ ಸಲಹೆ ನೀಡಿದೆ.
ಅಲ್ಲದೇ ಯಾವುದೇ ಆರೋಪಿ ಪರ ವಕೀಲ ವಕಾಲತ್ತು ವಹಿಸುವುದು ಆತನ ವೃತ್ತಿಧರ್ಮ. ಯಾರೊಬ್ಬರ ವಿರುದ್ಧ ವಕಾಲತ್ತು ವಹಿಸಬಾರದು ಎಂದು ಹೇಳುವ ಪ್ರವೃತ್ತಿ ವಕೀಲರಿಗೆ ಶೋಭೆ ತರುವುದಿಲ್ಲ.