ದೂರು ದಾಖಲಿಸಿಕೊಳ್ಳಲು ವಿಳಂಬ ಮಾಡುತ್ತಿರುವ ಪೊಲೀಸರು
ಜನಸ್ನೇಹಿ ಪೊಲೀಸ್ ವ್ಯವಸ್ಥೆ ಇಂದಿನ ಅಗತ್ಯ
ಬೆಂಗಳೂರು: ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಿರುವ ಕಾಯ್ದೆಗಳ ತಿದ್ದುಪಡಿ ಅಗತ್ಯವಿಲ್ಲ. ಕಾನೂನುಗಳು ಭದ್ರವಾಗಿವೆ. ಆದರೆ, ಅವುಗಳನ್ನು ಸಮರ್ಪಕವಾಗಿ ಜಾರಿಗೆ ತರುವ ಕೆಲಸ ಆಗುತ್ತಿಲ್ಲ ಎಂದು ಸಮಿತಿ ಅಧ್ಯಕ್ಷ ಎಂ.ಸಿ. ನಾಣಯ್ಯ ಹೇಳಿದರು.
ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಇಲಾಖೆ ವತಿಯಿಂದ ಏರ್ಪಡಿಸಿದ್ದ ಮಹಿಳಾ ಸುರಕ್ಷತೆ ಮತ್ತು ಭದ್ರತೆ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ
ಅವರು, ರಾಜ್ಯದಲ್ಲಿ ಈಗಾಗಲೇ ಇರುವ ದೌರ್ಜನ್ಯ ಕಾಯ್ದೆಗಳ ತಿದ್ದುಪಡಿ ಅಗತ್ಯವಿದೆಯೇ ಎಂಬುದರ ಅಧ್ಯಯನಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಗೆ ಹೋಗಿ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಅದನ್ನು ಗಮನಿಸಿದರೆ ಕಾನೂನು ಬಲವಾಗಿವೆ. ಪೊಲೀಸ್ ಇಲಾಖೆ, ನ್ಯಾಯಾಂಗ ವ್ಯವಸ್ಥೆ ಹಾಗೂ ಮಹಿಳಾ ಸುರಕ್ಷತೆ ಜವಾಬ್ದಾರಿ ಹೊತ್ತಿರುವ ಇಲಾಖೆ ಅಧಿಕಾರಿಗಳು ಅದನ್ನು ಗಟ್ಟಿಯಾಗಿ ಜಾರಿ ಮಾಡಲು ಶ್ರಮಿಸಬೇಕು ಎಂದರು.
ಮಹಿಳೆ ಮತ್ತು ಮಕ್ಕಳ ಮೇಲಾಗುವ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಮಾರು ಏಳೆಂಟು ಕಾಯ್ದೆಗಳಿವೆ. ಅವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗುತ್ತಿಲ್ಲ. ಈಗ ಅಧ್ಯಯನ ಮಾಡಿದ ಪ್ರಕಾರ ಸಾಕಷ್ಟು ಪ್ರಕರಣಗಳಲ್ಲಿ ಪೊಲೀಸರು ದೂರು ದಾಖಲಿಸಿಕೊಳ್ಳುವಲ್ಲಿ ವಿಳಂಬ ಮಾಡುತ್ತಾರೆ, ಪ್ರಕರಣ ತಡವಾಗಿ ಇತ್ಯರ್ಥವಾಗುತ್ತದೆ, ಸಾಕಷ್ಟು ಕಡೆ ದೂರು ನೀಡಲು ಹೋದವರನ್ನೇ ಅಪರಾಧಗಳಂತೆ ಕಾಣುತ್ತಾರೆ. ಜನಸ್ನೇಹಿ ಪೊಲೀಸ್ ವ್ಯವಸ್ಥೆ ಇಂದು ಇಲ್ಲವಾಗಿದೆ.
ನ್ಯಾಯ ಕೇಳಿ ಠಾಣೆಗೆ ಹೋಗುವವರಿಗೆ ಸರಿಯಾಗಿ ಸ್ಪಂದನೆ ಸಿಗುತ್ತಿಲ್ಲ. ಇಂತಹ ವ್ಯವಸ್ಥೆ ಸರಿಪಡಿಸಲು ಪೊಲೀಸರಿಗೆ ಹೆಚ್ಚಿನ ತರಬೇತಿ ಅಗತ್ಯ ಎಂದರು. ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷ ಮಂಜುಳಾ ಮಾನಸ, ಮೇಲ್ಮನೆ ಸದಸ್ಯೆ ಮೋಟಮ್ಮ, ಜಂಟಿ ಪೊಲೀಸ್ ಆಯುಕ್ತರಾದರೂಪಾ, ರಾಣಿ ಸತೀಶ್ ಉಪಸ್ಥಿತರಿದ್ದರು.
ಶೀಘ್ರ ವಿಲೇವಾರಿಗೆ ಒಪ್ಪಿಗೆ
ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣ ಇತ್ಯರ್ಥ ಸಾಕಷ್ಟು ತಡವಾಗುತ್ತಿರುವುದರಿಂದ ಅಂತಹ ಪ್ರಕರಣಗಳನ್ನು ಶೀಘ್ರದಲ್ಲಿ ಇತ್ಯರ್ಥ ಪಡಿಸುವಂತೆ ರಾಜ್ಯ ಹೈಕೋರ್ಟ್‍ನ ಮುಖ್ಯನ್ಯಾಯಾಧೀಶರನ್ನು ಭೇಟಿ ಮಾಡಿ ಚರ್ಚಿಸಲಾಗಿದೆ. ಅವರು ಶೀಘ್ರ ವಿಲೇವಾರಿಗೆ ಒಪ್ಪಿಗೆ ನೀಡಿದ್ದಾರೆ.
ನ್ಯಾಯಾಧೀಶರು ಶೀಘ್ರದಲ್ಲಿ ಅಂತಹ ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ತಿಳಿಸಿದರು. ನಗರದ ಎಲ್ಲಾ ಠಾಣೆಗಳಿಗೂ ಹೆಚ್ಚು ಮಹಿಳಾ ಸಿಬ್ಬಂದಿ ನೇಮಿಸಲು ಈಗಾಗಲೇ ಕ್ರಮಕೈಗೊಳ್ಳಲಾಗಿದೆ. ಉಳಿದಂತೆ ಶಾಲೆಗಳಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಕಡಿಮೆಯಾಗಿದ್ದು, ಅಲ್ಲಲ್ಲಿ ವರದಿಯಾಗುತ್ತಿವೆ. ಮಹಿಳೆ, ಮಕ್ಕಳ ಸುರಕ್ಷತೆಗಾಗಿ ಹಲವು ಕ್ರಮಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು.
ಎಸ್ ಗಾರ್ಡ್ ಬಿಡುಗಡೆ
ಮಹಿಳೆಯರ ಸುರಕ್ಷತೆ ಮತ್ತು ರಕ್ಷಣೆಗಾಗಿ ಸಿನರ್ಜಿಯಾ ಫೌಂಡೇಶನ್ ಸಂಸ್ಥೆಯು ಅಂತಾ ರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಎಸ್-ಗಾರ್ಡ್ ಎಂಬ ಆಪ್ ಅಭಿವೃದ್ಧಿ ಪಡಿಸಿದೆ. ಭಾನುವಾರ ಈ ಆಪ್ ಬಿಡುಗಡೆಯಾಗಿದ್ದು, ಆಪ್ ಕುರಿತು ಹಾಗೂ ಅದನ್ನು ಉಪಯೋಗಿಸುವ ಬಗ್ಗೆ ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿತ್ತು. ಆಫ್ರಿಕಾ, ದಕ್ಷಿಣ ಏಷ್ಯಾ, ಆಸ್ಟ್ರೇಲಿಯಾ ಸೇರಿದಂತೆ ನಾನಾ ರಾಷ್ಟ್ರಗಳಲ್ಲಿ ಮಹಿಳೆಯರ ಸುರಕ್ಷತೆಗಾಗಿ ಹಲವಾರು ಆಪ್ ಗಳನ್ನು ಬಳಸುತ್ತಿದ್ದು, ಯಶಸ್ವಿಯಾಗಿವೆ. ಹಲವು ತಿಂಗಳ ಕಾಲ ಅಧ್ಯಯನ ನಡೆಸಿ, ಅದೇ ಮಾದರಿಯಲ್ಲಿ ಆಪ್ ಅಭಿವೃದ್ಧಿಪಡಿಸಲಾಗಿದೆ ಎಂದು ಸಂಸ್ಥೆಯ ಟಾಬಿಸೈಮನ್ ತಿಳಿಸಿದರು.