ಜಿಲ್ಲಾ ಸುದ್ದಿ

ರಾಷ್ಟ್ರಕವಿ ಆಯ್ಕೆಗೆ ಆಸಕ್ತಿ ತೋರಿಸದ ಕನ್ನಡ ಮಂದಿ

ರಾಷ್ಟ್ರಕವಿ ಆಯ್ಕೆಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಕೋ. ಚನ್ನಬಸಪ್ಪ ನೇತೃತ್ವದ ಸಮಿತಿ ಕೋರಿದ್ದ ಸಾರ್ವಜನಿಕ ಅಭಿಪ್ರಾಯಕ್ಕೆ ಜನಸಾಮಾನ್ಯರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇಲ್ಲಿವರೆಗೆ ಕೇವಲ 133 ಮಂದಿ ಅಭಿಪ್ರಾಯ ತಿಳಿಸಿದ್ದು, ಇದರಲ್ಲಿ 9 ಮಂದಿ ರಾಷ್ಟ್ರಕವಿ ಆಯ್ಕೆಯೇ ಬೇಡವೆಂದು...

ಬೆಂಗಳೂರು: ರಾಷ್ಟ್ರಕವಿ ಆಯ್ಕೆಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಕೋ. ಚನ್ನಬಸಪ್ಪ ನೇತೃತ್ವದ ಸಮಿತಿ ಕೋರಿದ್ದ ಸಾರ್ವಜನಿಕ ಅಭಿಪ್ರಾಯಕ್ಕೆ ಜನಸಾಮಾನ್ಯರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇಲ್ಲಿವರೆಗೆ ಕೇವಲ 133 ಮಂದಿ ಅಭಿಪ್ರಾಯ ತಿಳಿಸಿದ್ದು, ಇದರಲ್ಲಿ 9 ಮಂದಿ ರಾಷ್ಟ್ರಕವಿ ಆಯ್ಕೆಯೇ ಬೇಡವೆಂದು ಹೇಳಿದ್ದಾರೆ.

ಅಚ್ಚರಿಯೆಂದರೆ, ಆಯ್ಕೆ ಶಿಫಾರಸಿಗಾಗಿ ಸಮಿತಿಯು ನಾಡಿನ 130 ವಿದ್ವಾಂಸರಿಗೆ ಕಳುಹಿಸಿದ್ದ ಪತ್ರಗಳಿಗೆ ಕೇವಲ 26 ಮಂದಿ ಹೆಸರು ಸೂಚಿಸಿದ್ದಾರೆ. ಉಳಿದವರ ಅಭಿಪ್ರಾಯ ಬೇಕೋ, ಬೇಡವೋ ಎಂಬುದು ನಿಗೂಢವಾಗುಳಿದಿದೆ. ಇದರಲ್ಲೂ ಆರು ವಿದ್ವಾಂಸರು ರಾಷ್ಟ್ರಕವಿ ಆಯ್ಕೆಯೇ ಬೇಡವೆಂದು ಹೇಳಿದ್ದಾರೆ. ಸಮಿತಿಯ ಅಭಿಪ್ರಾಯ ಸಂಗ್ರಹಣೆಗೆ ಸಾರ್ವಜನಿಕವಲಯದಿಂದಲೂ 96 ಪತ್ರಗಳು ಬಂದಿವೆ.ಇಲ್ಲಿ ಮೂವರು ಸಾರ್ವಜನಿಕರು ರಾಷ್ಟ್ರಕವಿ ಆಯ್ಕೆ ಬೇಡ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರಕವಿ ಆಯ್ಕೆಗೆ ಇಲ್ಲಿವರೆಗೆ ಬಂದ ಸಾರ್ವಜನಿಕ ಅಭಿಪ್ರಾಯಗಳಲ್ಲಿ ಹೆಚ್ಚು ಒಲವು ಯಾರ ಕಡೆ ಎಂಬುದು ನಿಗೂಢವಾಗಿದೆ. ಇದನ್ನು ಬಹಿರಂಗಪಡಿಸಲು ಸಮಿತಿ ಸದಸ್ಯರು ನಿರಾಕರಿಸಿದ್ದಾರೆ. ಸುಮಾರು 9 ಸಾಹಿತಿಗಳ ಹೆಸರುಗಳನ್ನು ಸೂಚಿಸಿ ಸಾರ್ವಜನಿಕರು ಇಲ್ಲಿ ತನಕ ತಮ್ಮ ಅಭಿಪ್ರಾಯ ಕಳುಹಿಸಿದ್ದಾರೆ. ಇದರಲ್ಲಿ ಪ್ರಧಾನವಾಗಿ ನಾಡಿನ ಇಬ್ಬರು ಹಿರಿಯ ಸಾಹಿತಿಗಳನ್ನು ಸೂಚಿಸಲಾಗಿದೆ. ಆದರೂ, ಇಲ್ಲಿ ಹೆಚ್ಚು ಅಭಿಪ್ರಾಯ ದಾಖಲಾಗಿದ್ದೇ ಆಯ್ಕೆಯ ಮಾನದಂಡವಲ್ಲ.

ಆಯ್ಕೆಗೆ ಸಮಿತಿ ವಿಧಿಸಿಕೊಂಡಿರುವ ಮಾನದಂಡಗಳಲ್ಲಿ ಇದು ಒಂದು ಅಂಶ ಮಾತ್ರ. ಇದರ ಜತೆಗೆ ಸಾಕಷ್ಟು ಅಂಶಗಳಿವೆ ಎನ್ನುತ್ತಾರೆ ಸಮಿತಿ ಸದಸ್ಯರಲ್ಲೊಬ್ಬರಾದ ಡಾ. ಬಂಜಗೆರೆ ಜಯಪ್ರಕಾಶ. ರಾಷ್ಟ್ರಕವಿ ಆಯ್ಕೆ ಪ್ರಕ್ರಿಯೆ ಶುರುವಾದಾಗಿನಿಂದ ನಾಡಿನ ಹಿರಿಯ ಸಾಹಿತಿಗಳಾದ ನಿಸಾರ್ ಅಹಮದ್ ಮತ್ತು ಚೆನ್ನವೀರ ಕಣವಿ ಹೆಸರುಗಳು ಹೆಚ್ಚು ಕೇಳಿಬಂದಿವೆ. ಆದರೆ, ಈ ಕ್ಷಣವೂ ಯಾವುದೇ ಹೆಸರನ್ನು ಬಹಿರಂಗ ಪಡಿಸಲು ನಿರಾಕರಿಸಿರುವ ಸಮಿತಿ, ಇಬ್ಬರು ಹಿರಿಯ ಸಾಹಿತಿಗಳು ಹೆಚ್ಚು ರೇಸ್‍ನಲ್ಲಿದ್ದಾರೆ ಎಂದು ಹೇಳಿರುವುದು, ಸಾರ್ವಜನಿಕ ವಲಯದಲ್ಲಿ ಆರಂಭದಿಂದಲೂ ಕೇಳಿಬಂದ ಮಾತುಗಳಿಗೆ ಪುಷ್ಟಿ ನೀಡಿವೆ. ಆದರೂ, ಅಂತಿಮ ನಿರ್ಧಾರ ಸಮಿತಿಯದ್ದೇ ಆಗಿರುವುದರಿಂದ ಇನ್ನು ನಿಗೂಢವೇ ಇದೆ.

ಅಂತಿಮ ಸಭೆ 13ಕ್ಕೆ ಈ ಮಧ್ಯೆ ರಾಷ್ಟ್ರಕವಿ ಆಯ್ಕೆಗೆ ನಾನಾ ರೀತಿಯ ಕಸರತ್ತು ನಡೆಸುತ್ತಿರುವ ನ್ಯಾಯಮೂರ್ತಿ ಕೋ.ಚೆನ್ನಬಸಪ್ಪ ಅಧ್ಯಕ್ಷತೆಯ ಸಮಿತಿ ಮಾ.13 ರಂದು ತನ್ನ ಅಂತಿಮ ಸಭೆ ಕರೆದಿದೆ. ಈ ಸಭೆಯಲ್ಲಿ ಸಾರ್ವಜನಿಕ ಅಭಿಪ್ರಾಯಗಳ ಜತೆಗೆ ಸಮಿತಿ ಸದಸ್ಯರ ವೈಯಕ್ತಿಕ ಅಭಿಪ್ರಾಯಗಳನ್ನು ದಾಖಲಿಸಿಕೊಳ್ಳಲು ತಯಾರಿ ನಡೆಸಿದೆ ಎಂದು ಹೇಳಲಾಗಿದೆ. ಆದರೆ, ರಾಷ್ಟ್ರಕವಿ ಆಯ್ಕೆ ವಿಚಾರದಲ್ಲಿ ಸಮಿತಿ ಸದಸ್ಯರ ನಡುವೆಯೇ ಸಾಕಷ್ಟು ಭಿನ್ನಾಭಿಪ್ರಾಯಗಳಿರುವುದರಿಂದ ಮತ್ತು ಭವಿಷ್ಯದ ದೃಷ್ಟಿಯಿಂದ ರಾಷ್ಟ್ರಕವಿ ಆಯ್ಕೆಗೆ ಇರಬೇಕಾದ ಮಾನದಂಡ ಹಾಗೂ ಆಯ್ಕೆ ನಂತರ ರಾಷ್ಟ್ರಕವಿಗೆ ನೀಡಬೇಕಾದ ಸಂವಿಧಾನಾತ್ಮಕ ಗೌರವಗಳ ಬಗ್ಗೆಯೂ ಸಮಿತಿ ವಿಸ್ತೃತವಾದ ವರದಿ ನೀಡಲು ಮುಂದಾಗಿರುವುದರಿಂದ ಆಯ್ಕೆಯ ಅಂತಿಮ ಸ್ವರೂಪ ಕುತೂಹಲ ಮೂಡಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ವಿದೇಶದಲ್ಲೂ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ; ಅಮೆರಿಕಾ ಸೇರಿದಂತೆ ಮೂರು ರಾಷ್ಟ್ರಗಳಿಗೆ ರಫ್ತು..!

CLP ಸಭೆಯಲ್ಲಿ ಸರ್ವಾನುಮತದಿಂದ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿತ್ತು, 50:50 ಒಪ್ಪಂದವಾಗಿಲ್ಲ: ಕೆ.ಜೆ. ಜಾರ್ಜ್ ಸ್ಪಷ್ಟನೆ

SCROLL FOR NEXT