ಬೆಂಗಳೂರು: ಹಿರಿಯ ಮನೋ ವಿಜ್ಞಾನಿ ಹಾಗೂ ನಿಮ್ಹಾನ್ಸ್ ನ ಮಾಜಿ ನಿರ್ದೇಶಕ ಡಾ. ರಾಜಾ ಮಾರ್ತಾಂಡ ವರ್ಮಾ(93) ಮಂಗಳವಾರ ನಿಧನರಾದರು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಅವರು ಆರೂವರೆ ದಶಕಗಳ ಕಾಲ ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ನಿಮ್ಹಾನ್ಸ್ ನ ಇವತ್ತಿನ ಖ್ಯಾತಿಯ ಹಿಂದೆ ವರ್ಮಾ ಅವರ ಪಾಲು ದೊಡ್ಡದಿದೆ ಎಂದು ನಿಮ್ಹಾನ್ಸ್ ಅಧಿಕಾರಿಗಳೇ ಒಪ್ಪಿಕೊಳ್ಳುತ್ತಾರೆ. ಇದಲ್ಲದೇ ದೇಶದ ಮೊದಲ ಐದು ನರರೋಗ ತಜ್ಞರಲ್ಲಿ ವರ್ಮಾ ಕೂಡ ಒಬ್ಬರಾಗಿದ್ದರು.
ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಉನ್ನತ ಶಿಕ್ಷಣ ಮುಗಿಸಿ ಲಂಡನ್‍ನಿಂದ ಬೆಂಗಳೂರಿಗೆ ಬಂದ ವರ್ಮಾ, 1958ರಲ್ಲಿ ನ್ಯೂರೋ ಸರ್ಜರಿ ವಿಭಾಗ ಆರಂಭಿಸಿದರು. ಅವರ ಪ್ರಯತ್ನದಿಂದಲೇ ಏಷ್ಯಾದ ಪ್ರಮುಖ ಮಾನಸಿಕ ಆರೋಗ್ಯ ಕೇಂದ್ರಗಳಲ್ಲಿ ನಿಮ್ಹಾನ್ಸ್ ಕೂಡ ಒಂದು ಎಂಬಂತಾಗಿದೆ. 1958ರಲ್ಲಿ ಆರಂಭವಾದ ಈ ಕೇಂದ್ರವೇ ಮುಂದೆ ನಿಮ್ಹಾನ್ಸ್ ಆಯಿತು. ಇದಲ್ಲದೇ ನಿಮ್ಹಾನ್ಸ್ ನ ಸಂಸ್ಥಾಪಕ ನಿರ್ದೇಶಕರಾಗಿ ಉತ್ತಮ ಅಡಿಪಾಯ ಹಾಕಿದರು.
ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಅವರ ಅವಿಸ್ಮರಣೀಯ ಸೇವೆ ಪರಿಗಣಿಸಿ 1969ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 1970ರಲ್ಲಿ ಪದ್ಮಶ್ರೀ ಸೇರಿದಂತೆ ನಾನಾ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪುರಸ್ಕಾರಗಳಿಗೆ ಅವರು ಭಾಜನರಾಗಿದ್ದರು. ಇದಲ್ಲದೇ ಮಾಜಿ ರಾಷ್ಟ್ರಪತಿ ಆರ್.ವೆಂಕಟರಾಮನ್ ಅವರಿಗೆ ಗೌರವ ವೈದ್ಯರಾಗಿ ಸೇವೆ ಸಲ್ಲಿಸಿದ್ದ ಡಾ.ವರ್ಮಾ, ಕೇಂದ್ರ ಸರ್ಕಾರದ ಆರೋಗ್ಯ ಲಾಖೆ ಉಪ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. ಇದಕ್ಕೂ ಮುಂಚೆ ಬೆಂಗಳೂರು ವಿವಿಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ವಿಭಾಗದ ಡೀನ್ ಆಗಿ ಕೆಲಸ ಮಾಡಿದ್ದರು.