ಜಿಲ್ಲಾ ಸುದ್ದಿ

ನೀರಿಗಾಗಿ ಪರದಾಡುತ್ತಿದ್ದವರ ನೋಡುತ್ತಲೇ ಕುಳಿತ!

ಬೆಂಗಳೂರು: ಪಾಲಕರು ಹಾಗೂ ಸಹೋದರಿಯರು ವಿಷಾಹಾರ ಉಂಡುಗಂಟಲು ಒಣಗಿ ಅಂತಿಮ ಕ್ಷಣದಲ್ಲಿ ನೀರಿಗಾಗಿ ಪರದಾಡುತ್ತಿದ್ದರೂ ನೋಡುತ್ತಲೇ ಕಾಲ ಕಳೆದಿದ್ದನಾ ಖಿನ್ನ ಮನಸ್ಥಿತಿಯ ಯತೀಶ್? ಘಟನಾ ಸ್ಥಳದ ಸೂಕ್ಷ್ಮಪರಿಶೀಲನೆ ನಡೆಸಿದ ಪೊಲೀಸರು ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಇಂತಹ ಅನುಮಾನ ವ್ಯಕ್ತಪಡಿಸಿದ್ದಾರೆ.

ನಾಗರಬಾವಿ ಎಂಪಿಎಂ ಬಡಾವಣೆಯಲ್ಲಿ ತಂದೆ-ತಾಯಿ ಹಾಗೂ ಸಹೋದರಿಯರಿಗೆ ವಿಷ ನೀಡಿ ಶವಗಳೊಂದಿಗೆ 24 ತಾಸುಗಳಿಗೂ ಹೆಚ್ಚು ಕಾಲ ಕಳೆದಿದ್ದ ಯತೀಶ್, ಎಲ್ಲರ ಸಾವನ್ನು ಅತ್ಯಂತ ನಿರ್ಭಾವುಕನಾಗಿ ನೋಡಿರುವ ಸಾಧ್ಯತೆ ಇದೆ. ವಿಷಾಹಾರ ಸೇವಿಸಿದ ಐದು ಮಂದಿ ಕೆಲ ಹೊತ್ತಿನ ಬಳಿಕ ಅಸ್ವಸ್ಥಗೊಂಡು ನೀರಿಗಾಗಿ ಪರದಾಡಿದ್ದಾರೆ.

ಮನೆ ದೊಡ್ಡದಾಗಿದ್ದು ಹೊರಗೆ ಜನ ಸಂಚಾರ ಕಡಿಮೆ. ಹೀಗಾಗಿ, ಅಂತಿಮ ಕ್ಷಣದಲ್ಲಿ ಐವರ ಕಿರುಚಾಟ ಯಾರಿಗೂ ಕೇಳಿಸಿಲ್ಲ. ಐವರೂ ಮೃತಪಟ್ಟ ನಂತರ ಯತೀಶ್ ಶವಗಳನ್ನು ಬೇರೆ ಬೇರೆ ಕೊಠಡಿಗಳಲ್ಲಿ ಮಲಗಿದಂತೆ ಹಾಕಿದ್ದಾನೆ. ಊಟ ತಂದಿದ್ದ: ಬುಧವಾರ ಬೆಳಗ್ಗೆ ಕೆಲಸಕ್ಕೆ ಬಂದಿದ್ದ ಕಸ್ತೂರಿಯನ್ನು ಇನ್ನು ಮುಂದೆ ಕೆಲಸಕ್ಕೆ ಬರಬೇಡ ಎಂದು ಹೇಳಿ ಕಳುಹಿಸಿದ್ದ ಯತೀಶ್, ನಂತರ ಹೊರಗೆ ಹೋಗಿ ಊಟವನ್ನು ಪಾರ್ಸಲ್ ತಂದಿದ್ದ. ಆದರೆ, ಶವಗಳ ಮುಂದೆ ಊಟ ಮಾಡಲು ಸಾಧ್ಯವಾಗದೆ ಅದನ್ನು ಹಾಗೇ ಬಿಟ್ಟಿದ್ದ.

ಮಂಗಳವಾರ ರಾತ್ರಿ ಊಟಕ್ಕಾಗಿ ಅನ್ನ ಮತ್ತು ಸಾಂಬಾರ್ ಮಾಡಲಾಗಿತ್ತು. ಈ ವೇಳೆ ಯತೀಶ್ ಸಾಂಬಾರ್‍ನಲ್ಲಿ ವಿಷ ಬೆರೆಸಿರುವ ಸಾಧ್ಯತೆ ಇದೆ ಎಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ.

SCROLL FOR NEXT