ಬೆಂಗಳೂರು: ರಾಜ್ಯದಲ್ಲಿ 2006ರಿಂದ 2013ರವರೆಗೆ ಸ್ಥಗಿತಗೊಂಡಿದ್ದ ಸಾಮಾಜಿಕ ನ್ಯಾಯದ ರಥಯಾತ್ರೆಗೆ ಸಿಎಂ ಸಿದ್ದರಾಮಯ್ಯ ಈ ಸಾಲಿನ ಮುಂಗಡಪತ್ರದಲ್ಲಿ ಇನ್ನಷ್ಟು ಬಲ ನೀಡಿದ್ದಾರೆ ಎಂದು ಡಾ.ರಾಮಮನೋಹರ ಲೋಹಿಯಾ ವಿಚಾರ ವೇದಿಕೆ ಅಧ್ಯಕ್ಷ ಬಿ.ಎಸ್.ಶಿವಣ್ಣ ಅಭಿಪ್ರಾಯಪಟ್ಟಿದ್ದಾರೆ.
ಶೋಷಿತ ವರ್ಗದ ಧ್ರುವೀಕರಣ, ಡಾ.ಬಿ.ಆರ್.ಅಂಬೇಡ್ಕರ್, ಲೋಹಿಯಾ, ಕಾಮರಾಜ, ಕರ್ಪೂರಿ ಠಾಕೂರ್, ದೇವರಾಜ ಅರಸು ಆಶಯಗಳನ್ನು ಸಿಎಂ ಸಿದ್ದರಾಮಯ್ಯ ಅವರಿಂದ ಮಾತ್ರ ಅನುಷ್ಠಾನಗೊಳಿಸುವುದಕ್ಕೆ ಸಾಧ್ಯ ಎಂಬುದನ್ನು ಸಾಬೀತು ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
10ನೇ ಬಾರಿಗೆ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್ ಕ್ರಾಂತಿಕಾರಕ , ಸರ್ವರಿಗೂ ಸಮಬಾಳು ಸಮಪಾಲು ತತ್ವದಂತೆ ಅನುದಾನ ಹಂಚಿಕೆ ಮಾಡಿದ್ದಾರೆ. ಬಸವಣ್ಣನ ಕಲ್ಯಾಣ ರಾಜ್ಯದ ಕಲ್ಪನೆ, ಅಂಬೇಡ್ಕರ್‍ರ ಸಮಾನತೆ, ಲೋಹಿಯಾರ ಸಮಾಜವಾದ, ಅರಸು ಅವರ ಸಾಮಾಜಿಕ ನ್ಯಾಯದ ತತ್ವದ ಆಧರಿತ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದಾರೆ.
ನಗರ, ಗ್ರಾಮಾಣ, ಅಲ್ಪಸಂಖ್ಯಾತ, ಹಿಂದುಳಿದ, ದಲಿತ, ರೈತರ ಹಾಗೂ ಶೋಷಿತ ವರ್ಗದವರ ಬಗ್ಗೆ ವಿಶೇಷ ಕಾಳಜಿ ತೋರಿ, ಶ್ರೀಸಾಮಾನ್ಯನ ಮನೆಬಾಗಿಲಿಗೆ ಸಾಮಾಜಿಕ ನ್ಯಾಯದ ರಥವನ್ನು ತಂದು ನಿಲ್ಲಿಸಿದ್ದಾರೆ ಎಂದಿದ್ದಾರೆ.
ಶೋಷಿತರಿಗೆ ಹೆಚ್ಚಿನ ಪಾಲು ಛಲವಾದಿ ಮಹಾಸಭಾ ಹರ್ಷ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಯವ್ಯಯದಲ್ಲಿ ದಲಿತ ಮತ್ತು ಶೋಷಿತ ವರ್ಗಕ್ಕೆ ಹೆಚ್ಚಿನ ಪಾಲನ್ನು ನೀಡಿರುವುದು ಅಬಿsನಂದನಾರ್ಹ. ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ವಿವಿಧ ಉಪಯೋಜನೆಗಳ ಅಡಿ ಒದಗಿಸಲಾಗಿರುವ ರು.16,356 ಕೋಟಿ ಒಂದು ದಾಖಲೆಯ ಮೊತ್ತ ಎಂದು ಛಲವಾದಿ ಮಹಾಸಭಾದ ರಾಜ್ಯಾಧ್ಯಕ್ಷ ಎಚ್.ಪಿ.ಕುಮಾರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹ ಧನ ಹೆಚ್ಚಳ, ಮನೆ ನಿರ್ಮಾಣ, ಗಣ್ಯರ ಸ್ಮಾರಕ ನಿರ್ಮಾಣಕ್ಕೆ ಹಣ ಮೀಸಲು ಸೇರಿದಂತೆ ಅಹಿಂದ ವರ್ಗಕ್ಕೆ ಸಾಕಷ್ಟು ಕೊಡುಗೆ ನೀಡಲಾಗಿದೆ. ಹಾಗಾಗಿ ಮಹಾಸಭಾ ಮುಖ್ಯಮಂತ್ರಿಗಳನ್ನು ಅಬಿsನಂದಿಸುತ್ತಿದೆ ಎಂದರು. ಶಿವರಾಂಗೆ ನೋಟಿಸ್: ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಂ ಅವರನ್ನು ಮಹಾಸಭಾದ ಗೌರವಾಧ್ಯಕ್ಷರಾಗಿ ನೇಮಿಸಲಾಗಿತ್ತು. ಈಗ ಅವರನ್ನು ಆ ಸ್ಥಾನದಿಂದ ತೆರವುಗೊಳಿಸಲಾಗಿದೆ. ಮಹಾಸಭಾದ ಧ್ಯೇಯೋದ್ದೇಶಗಳಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿರುವ ಅವರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ. ಈ ನಡುವೆಯೂ ಅವರು ಮಹಾಸಭಾದ ಹೆಸರನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದು, ಪ್ರಚಾರಕ್ಕಾಗಿ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಕುಮಾರ್ ಹೇಳಿದರು.