ಬೆಂಗಳೂರು: ವಕೀಲರ ಪರಿಷತ್‍ನಲ್ಲಿ ನೋಂದಾಯಿಸಿಕೊಂಡಿರುವ ವಕೀಲರು ಬೇರೆ ವೃತ್ತಿಯಲ್ಲಿ ತೊಡಗಿದ್ದಲ್ಲಿ ಅವರ ಸನ್ನದು ರದ್ದುಗೊಳಿಸಲು ರಾಜ್ಯ ವಕೀಲ ಪರಿಷತ್ ಮುಂದಾಗಿದೆ.
ಕಾನೂನು ಪದವಿ ಪೂರೈಸಿ ವಕೀಲ ಪರಿಷತ್‍ನಲ್ಲಿ ಹೆಸರು ನೋಂದಾಯಿಸಿ ಕೊಂಡವರು ಈಗಾಗಲೇ ಸರ್ಕಾರಿ ಹಾಗೂ ಅನ್ಯವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರೆ ಕಾನೂನಿನ ಪ್ರಕಾರ ಅವರೇ ಅರ್ಜಿ ಸಲ್ಲಿಸಿ ಸನ್ನದ್ದು ರದ್ದು ಮಾಡಿಸಿ ಕೊಳ್ಳಬೇಕು. ಒಂದಮ್ಮೆ ಅವರು ಸನ್ನದ್ದು ರದ್ದು ಮಾಡಿಸದಿದ್ದರೆ ವಕೀಲ ಕಾಯಿದೆ 1961, ಸೆಕ್ಷನ್ 35ರ ಪ್ರಕಾರ ವೃತ್ತಿ ದುರ್ನಡತೆ ಎಂದು ಪರಿಗಣಿಸಿ ಅಂತವರ ವಿರುದ್ದ ಕ್ರಮ ತೆಗೆದು ಕೊಳ್ಳಲು ಪರಿಷತ್‍ಗೆ ಅವಕಾಶವಿದೆ. ಸದ್ಯ ದಲ್ಲೇ ಈ ಪ್ರಕ್ರಿಯೆ ಆರಂಭಿಸುವುದಾಗಿ ರಾಜ್ಯ ವಕೀಲ ಪರಿಷತ್ ನ ಅಧ್ಯಕ್ಷ ಪಿ.ಪಿ.ಹೆಗ್ಡೆ ತಿಳಿಸಿದ್ದಾರೆ.
ಈ ಕುರಿತು ಜ.2015ರಲ್ಲಿ ಭಾರತೀಯ ವಕೀಲ ಪರಿಷತ್ ಸುತ್ತೋಲೆ ಹೊರಡಿಸಿತ್ತು. ರಾಜ್ಯದಲ್ಲೂ ಈ ಕಾನೂನನ್ನು ಬಲವಾಗಿ ಜಾರಿಗೆ ತರಲು ಪರಿಷತ್ ನಿರ್ಧರಿಸಿದೆ. ಈಗಾಗಲೇ ಎರಡು ಭಾರಿ ಪರಿಷತ್ ಸದಸ್ಯರೊಂದಿಗೆ ಚರ್ಚೆ ನಡೆಸಿದ್ದು ಇನ್ನೆರೆಡು ತಿಂಗಳಲ್ಲಿ ಅನ್ಯ ವೃತ್ತಿಯಲ್ಲಿ ತೊಡಗಿಕೊಂಡವರ ಮಾಹಿತಿ ದೊರೆಯಲಿದೆ ಎಂದು ಪರಿಷತ್ ಅಧ್ಯಕ್ಷರು ಸ್ಪಷ್ಟಪಡಿಸಿದರು.
ಪತ್ತೆ ಹೇಗೆ?...
ಇದು ಸವಾಲಿನ ಕೆಲಸ. ರಾಜ್ಯ,ಜಿಲ್ಲಾ ಹಾಗೂ ತಾಲೂಕು ಮಟ್ಟದ ವಕೀಲ ಸಂಘಕ್ಕೆ ಪರಿಷತ್ ಸೂಚನೆ ನೀಡಿದ್ದು ವಕೀಲ ಸಂಘದಿಂದ ದೊರೆಯುವ ಮಾಹಿತಿ ಆಧರಿಸಿ ಪರಿಷತ್ ಕ್ರಮಕೈಗೊಳ್ಳಲಿದೆ. ಕಾರಣಾಂತರದಿಂದ ವೃತ್ತಿಯಿಂದ ದೂರ ಉಳಿದವರು ಮತ್ತೊಮ್ಮೆ ವೃತ್ತಿ ಅರಸಿ ಬಂದರೆ ಮುಂದುವರಿಯಲು ಪರಿಷತ್ ಅವಕಾಶ ನೀಡಲಿದೆ. ವಕೀಲಿಕೆ ಬಿಟ್ಟವರಿಗೆ ಮೊದಲು ನೋಟಿಸ್ ನೀಡಿ, ಅವರ ಉತ್ತರಕ್ಕೆ ಅನುಗುಣವಾಗಿ ಪರಿಷತ್ ಮುಂದಿನ ಕ್ರಮ ತೆಗೆದುಕೊಳ್ಳುತ್ತದೆ. ಶೀಘ್ರದಲ್ಲೇ ಅನ್ಯ ವೃತ್ತಿಯಲ್ಲಿನ ವಕೀಲರನ್ನು ಪತ್ತೆ ಹಚ್ಚಲು ನೂತನ ನಿಯವಳಿ ಜಾರಿತರಲಾಗುವುದು. ಇದರಿಂದ ಪತ್ತೆ ಕಾರ್ಯ ಇನ್ನಷ್ಟು ಸುಲಭವಾಗಲಿದೆ ಬಹಳಷ್ಟು ಸಂದರ್ಭದಲ್ಲಿ ವಕೀಲರೇ ಸ್ವಯಂ ಪ್ರೇರಿತರಾಗಿ ಸನ್ನದ್ದು ರದ್ದುಪಡಿಸುವಂತೆ ಕೋರಿ ಅರ್ಜಿ ದಾಖಲಿಸಿದ್ದ ಉದಾಹರಣೆಗಳು ಸಹ ಇದೆ ಎಂದು ಹೆಗ್ಡೆ ತಿಳಿಸಿದ್ದಾರೆ.